ಬೆಂಗಳೂರು: ಮುಡಾ ಹಗರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಬಿ.ಎಂ.ಪಾರ್ವತಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಇವರ ಸಹೋದರ ಬಿ.ಎಂ. ಮಲ್ಲಿಕಾರ್ಜುನಸ್ವಾಮಿ ಮುಡಾದ ಮಾಜಿ ಅಧ್ಯಕ್ಷರಾದ ಬಸವನಗೌಡ, ಹೆಚ್.ವಿ. ರಾಜೀವ್ ಹಾಗೂ ಆಯುಕ್ತರಾಗಿದ್ದ ಡಿ.ಬಿ. ನಟೇಶ್ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ ಹಾಗೂ ಭ್ರಷ್ಟಾಚಾರ ಆರೋಪದಡಿ ಎನ್.ಆರ್. ರಮೇಶ್ ದೂರು ದಾಖಲಿಸಿದ್ದಾರೆ. ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆಗಳಲ್ಲಿ ಒಟ್ಟು 38,284 ಚದರ್ ಅಡಿ ವಿಸ್ತೀರ್ಣದ 14 ನಿವೇಶನಗಳನ್ನು 'ಬದಲಿ ನಿವೇಶನ'ದ ಹೆಸರಿನಲ್ಲಿ ಬಿ.ಎಂ. ಪಾರ್ವತಿಯವರ ಹೆಸರಿಗೆ 2021-2022ರಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಂಚಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಎನ್.ಆರ್. ರಮೇಶ್ ಆಪಾದಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ನಿಯಮ ಪ್ರಕಾರ ಬಡಾವಣೆಯ ನಿರ್ಮಾಣಕ್ಕೆಂದು ಪ್ರಾಧಿಕಾರವು ಸ್ಥಳೀಯರ ಸ್ವತ್ತುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುತ್ತದೆಯೋ, ಅಂತಹ ಸ್ವತ್ತುಗಳ ಮಾಲೀಕರಿಗೆ ಅದೇ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಬೇಕು ಅಥವಾ ಆ ಬಡಾವಣೆಯ ನಂತರ ಪ್ರಾಧಿಕಾರವು ಅಭಿವೃದ್ಧಿಪಡಿಸುವ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಬಹುದಾಗಿರುತ್ತದೆ. ಆದರೆ, ಎಂತಹ ಸಂದರ್ಭದಲ್ಲಿಯೂ ಸಹ ಉದ್ದೇಶಿತ ಬಡಾವಣೆಯ ನಿವೇಶನಗಳಿಗೆ ಬದಲಾಗಿ, ಬಡಾವಣೆಗಿಂತಲೂ ಮುಂಚಿತವಾಗಿ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವುದು ಅಪರಾಧವಾಗಿದೆ ಎಂದು ದೂರಿದ್ದಾರೆ.
ಆದರೆ, ಈ ಪ್ರಕರಣದಲ್ಲಿ ಬಿ.ಎಂ.ಪಾರ್ವತಿಯವರಿಗೆ ವಾಸ್ತವವಾಗಿ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳಿಗೆ ಬದಲಾಗಿ, ಅದಕ್ಕಿಂತಲೂ ಹತ್ತಾರು ವರ್ಷಗಳ ಹಿಂದೆಯೇ ಮುಡಾ ಅಭಿವೃದ್ಧಿಪಡಿಸಿರುವ ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆಗಳಲ್ಲಿನ ಅತ್ಯಂತ ಆಯಕಟ್ಟಿನ ಸ್ಥಳಗಳಲ್ಲಿರುವ ದುಬಾರಿ ನಿವೇಶನಗಳನ್ನು ಬದಲಿ ನಿವೇಶನದ ಹೆಸರಿನಲ್ಲಿ ಹಂಚಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ರಾಜ್ಯದ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯ ಅವರ ರಾಜಕೀಯ ಪ್ರಭಾವಗಳಿಗೆ ಒಳಗಾಗಿ ಮುಡಾದ ಅಧ್ಯಕ್ಷರಾಗಿದ್ದ ಹೆಚ್.ವಿ. ರಾಜೀವ್ ಮತ್ತು ಆಯುಕ್ತರಾಗಿದ್ದ ಡಿ.ಬಿ. ನಟೇಶ್ ಅವರು ಈ ಕಾನೂನುಬಾಹಿರ ಕೃತ್ಯವನ್ನು ಎಸಗಿದ್ದಾರೆ ಎಂದು ಎನ್.ಆರ್. ರಮೇಶ್ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ ಬಯಲಿಗೆಳೆದ ಆರ್ಟಿಐ ಕಾರ್ಯಕರ್ತರಿಗೆ ರಾಜ್ಯ ಸರ್ಕಾರದಿಂದ ಕಿರುಕುಳ: ಕೇಂದ್ರ ಸಚಿವ ಹೆಚ್ಡಿಕೆ ಆರೋಪ - MUDA Scam