ಬೆಂಗಳೂರು : ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಎಂದು ರೈತರಿಗೆ ನೀಡಿರುವ ನೋಟಿಸ್ ವಾಪಸ್ ಪಡೆದು ಪಹಣಿ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ 15 ದಿನಗಳ ಗಡುವು ನೀಡುತ್ತಿದ್ದು, ಅಷ್ಟರಲ್ಲಿ ಪಹಣಿ ತಿದ್ದುಪಡಿ ಮಾಡದಿದ್ದರೆ ನಾವು ರಾಜ್ಯಾದ್ಯಂತ ಆಂದೋಲನ ಮಾಡುತ್ತೇವೆ ಎಂದು ಸಂಸದ ಗೋವಿಂದ ಕಾರಜೋಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ನೋಂದಣಿ ವಿಚಾರ ಗಮನಕ್ಕೆ ಬಂದಿದೆ. ಇದು ಮಹಮ್ಮದ್ ಬಿನ್ ತುಘಲಕ್ ಆಡಳಿತ. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದು ರೈತರು ಆಸ್ತಿ, ಮನೆ ಕಳೆದುಕೊಳ್ಳುವ ಸ್ಥಿತಿ ಬಂದಿದೆ, 15000 ಎಕರೆ ವಕ್ಫ್ ಆಸ್ತಿ ಅಂತಾ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ಇದು ಕಾಂಗ್ರೆಸ್ ದುರಾಡಳಿತ ಎಂದು ಕರೆದಿದ್ದಾರೆ.
ದಲಿತರಿಗೆ ಭೂಮಿ ಒದಗಿಸಬೇಕಾಗಿದ್ದ ಸರ್ಕಾರ ಇಂದು ವಕ್ಫ್ ಆಸ್ತಿಗಾಗಿ ಅವರಿಂದಲೇ ಭೂಮಿ ಕಿತ್ತುಕೊಳ್ಳುತ್ತಿದೆ. ಕಾಂಗ್ರೆಸ್ ಸರ್ಕಾರ ತುಘಲಕ್ ಮಾದರಿಯ ಆಡಳಿತ ನಡೆಸುತ್ತಿದೆ.
— BJP Karnataka (@BJP4Karnataka) October 27, 2024
ವಕ್ಫ್ ಕಾಯ್ದೆಯ ಕುರಿತು ಪರಾಮರ್ಶಿಸಲು ಸಂಸತ್ತಿನಲ್ಲಿ ಜಂಟಿ ಸದನ ಸಮಿತಿ ರಚಿಸಿರುವ ನಡುವೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ, ದಲಿತರ ಭೂಮಿಯನ್ನು ಕಿತ್ತುಕೊಳ್ಳಲು… pic.twitter.com/1coYy99Mol
ರಾಜ್ಯಾದ್ಯಂತ ಆಂದೋಲನ ಮಾಡುತ್ತೇವೆ : ಹರಿಜನ-ಗಿರಿಜನರಿಗೆ ಭೂಮಿ ಕೊಡುವುದು ಬಿಟ್ಟು ಅವರಿಗೆ ನೋಟಿಸ್ ಕೊಟ್ಟು ಭೂಮಿ ಕಿತ್ತುಕೊಳ್ಳುತ್ತಿದ್ದಾರೆ. ವಕ್ಫ್ ತಿದ್ದುಪಡಿ ಕಾಯ್ದೆ ಬರುವ ಮೊದಲೇ ಭೂಮಿ ಕಿತ್ತುಕೊಳ್ಳಲು ಸರ್ಕಾರದಿಂದ ಹುನ್ನಾರ ನಡೆದಿದೆ. ಬಿಜೆಪಿಯಿಂದ ಸರ್ಕಾರಕ್ಕೆ 15 ದಿನಗಳ ಸಮಯ ಕೊಡುತ್ತೇವೆ. ಅಷ್ಟರಲ್ಲಿ ಪಹಣಿ ತಿದ್ದುಪಡಿ ಮಾಡದಿದ್ದರೆ ನಾವು ರಾಜ್ಯಾದ್ಯಂತ ಆಂದೋಲನ ನಡೆಸುತ್ತೇವೆ ಎಂದು ಕಾರಜೋಳ ಎಚ್ಚರಿಕೆ ರವಾನಿಸಿದರು.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ, ಡಿಸಿಎಂ ಮೂರು ಉಪಚುನಾವಣಾ ಕ್ಷೇತ್ರಗಳ ಕುರಿತು ಸಭೆ ನಡೆಸಿ, ಸರ್ಕಾರಿ ಕಚೇರಿ ಜಾಗ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರು ಯಾವುದನ್ನು ಕಾನೂನು ಬದ್ಧವಾಗಿ ಮಾಡಿದ್ದಾರೆ? ಎಲ್ಲವನ್ನೂ ಕಾನೂನಿಗೆ ವಿರುದ್ಧವಾಗಿಯೇ ಮಾಡಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಎಂಎಲ್ಸಿ ರವಿಕುಮಾರ್ ಮಾತನಾಡಿ, ''ಸಿದ್ದರಾಮಯ್ಯ ಅವರು ಅಕ್ರಮವಾಗಿ 14 ಸೈಟ್ ತಗೊಂಡಿದ್ರು. ನಂತರ ವಾಪಸ್ ಮಾಡಿದ್ರು. ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತ ಇದ್ಯೋ? ಅಥವಾ ಎರಡನೇ ಟಿಪ್ಪು ಆಡಳಿತ ಇದ್ಯೋ? ಜಮೀರ್ ಅವರು ಟಿಪ್ಪು ಸುಲ್ತಾನ್ ಅವರ ಅಪರಾವತಾರ ಆಗಿದ್ದಾರೆ. ಈ ಸರ್ಕಾರ ಸಚಿವರ ರಾಜೀನಾಮೆ ತಗೋಬೇಕು. ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯದೇ ಹೋದರೆ ಹೋರಾಟ ಮಾಡಬೇಕಾಗುತ್ತದೆ'' ಎಂದು ಹೇಳಿದರು.
ಜಮೀರ್ ಅಹ್ಮದ್ ಖಾನ್ ರಾಜೀನಾಮೆ ಕೊಡಬೇಕು: ವಕ್ಫ್ ಬೋರ್ಡ್ನಿಂದ ಅನೇಕ ರೈತರಿಗೆ ನೋಟಿಸ್ ಕೊಟ್ಟಿದ್ದಾರೆ. ವಿಜಯಪುರಕ್ಕೆ ಹೋದಾಗ ಜಮೀರ್ ಅಹ್ಮದ್ ಖಾನ್ ಅವರು ಇದು ವಕ್ಫ್ ಜಮೀನು ಎಂದಿದ್ದಾರೆ. ರೈತರು ತಮಗೆ ನೋಟಿಸ್ ಬಂದಾಗ ಗಾಬರಿ ಆಗಿದ್ದಾರೆ. ಸರ್ಕಾರದ ಕ್ರಮವನ್ನು ಬಿಜೆಪಿ ಖಂಡಿಸುತ್ತದೆ. ವಕ್ಫ್ ಆಸ್ತಿ ಜಾಸ್ತಿ ಮಾಡಿಕೊಳ್ಳಲು ಹುನ್ನಾರ ನಡೆದಿದೆ. ಈ ಕೂಡಲೇ ಈ ಹುನ್ನಾರಕ್ಕೆ ಕಾರಣರಾದ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆ ಕೊಡಬೇಕು ಎಂದು ರವಿಕುಮಾರ್ ಒತ್ತಾಯಿಸಿದರು.
ರಾಜ್ಯ ಬಿಜೆಪಿ ವತಿಯಿಂದ ತಂಡ ರಚನೆ : ವಿಜಯಪುರ ಜಿಲ್ಲೆಯಾದ್ಯಂತ ವಕ್ಫ್ ಬೋರ್ಡ್ ಕಾಯ್ದೆಯಿಂದ ಆಗುತ್ತಿರುವ ತೊಂದರೆ ಹಾಗೂ ತೊಂದರೆಗೊಳಗಾದ ರೈತರ ಅಹವಾಲನ್ನು ಕೇಳಲು ರಾಜ್ಯ ಬಿಜೆಪಿ ವತಿಯಿಂದ ತಂಡವನ್ನು ರಚಿಸಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ತಂಡಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಸೂಚಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ನೋಟಿಸ್ನಿಂದ ರೈತರು ಆತಂಕಕ್ಕೆ ಸಿಲುಕಿರುವ ಬೆನ್ನಲ್ಲೇ ಹೋರಾಟಕ್ಕೆ ಮುಂದಾಗಿರುವ ಬಿಜೆಪಿ ಅದಕ್ಕೂ ಮುನ್ನ ಸಂತ್ರಸ್ತರ ಅಹವಾಲು ಆಲಿಸಲು ನಿರ್ಧರಿಸಿದೆ. ಹಾಗಾಗಿ, ಸಂಸದ ಗೋವಿಂದ ಕಾರಜೋಳ ನೇತೃತ್ವದ ತಂಡವನ್ನು ರಚಿಸಲಾಗಿದೆ. ಈ ತಂಡದಲ್ಲಿ ಶಾಸಕರಾದ ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ಮಾಜಿ ಎಂಎಲ್ಸಿ ಅರುಣ್ ಶಹಾಪುರ್, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಸದಸ್ಯರಾಗಿರಲಿದ್ದು, ಈ ತಂಡವು ಅ. 29ರಂದು ಸ್ಥಳಕ್ಕೆ ಭೇಟಿ ನೀಡಲಿದೆ. ತಂಡದ ಸದಸ್ಯರು ರೈತರ ಸಮಸ್ಯೆಯ ಸಮಗ್ರ ವರದಿಯನ್ನು ನೀಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ನಿರ್ದೆಶಿಸಿದ್ದಾರೆ.
ಇದನ್ನೂ ಓದಿ : ಬೇರೆಯವರ ಒಂದಿಂಚು ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಹೇಳಲ್ಲ: ಸಚಿವ ಜಮೀರ್ ಅಹ್ಮದ್