ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಇನ್ನೆರಡು ದಿನಗಳಲ್ಲಿ ಹಾಲಿ ಸಂಸದರು ಸೇರಿದಂತೆ ಅಭ್ಯರ್ಥಿಗಳ ಹೆಸರುಗಳನ್ನು ರಾಜ್ಯ ಘಟಕದಿಂದ ಹೈಕಮಾಂಡ್ಗೆ ಕಳುಹಿಸಿಕೊಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ಪಕ್ಷದ ರಾಜ್ಯ ಕಾರ್ಯಾಲಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಭಾನುವಾರ ಕೋರ್ ಕಮಿಟಿ ಸಭೆ ನಡೆಯಿತು. ಅಭ್ಯರ್ಥಿಗಳ ಆಯ್ಕೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕೆಲ ಕ್ಷೇತ್ರಗಳಲ್ಲಿ ಹಾಲಿಗಳು ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಹೊಸಬರ ಆಯ್ಕೆ ಬಗ್ಗೆ ಚರ್ಚಿಸಲಾಯಿತು. ಪ್ರತಿ ಕ್ಷೇತ್ರದ ಆಕಾಂಕ್ಷಿಗಳು, ಅವರ ಸಾಮರ್ಥ್ಯ, ಗೆಲ್ಲುವ ಸಾಮರ್ಥ್ಯದ ಕುರಿತಂತೆ ಚರ್ಚಿಸಿ, ಸ್ಥಳೀಯ ನಾಯಕರ ಅಭಿಪ್ರಾಯಗಳ ಕುರಿತು ಅವಲೋಕನ ನಡೆಸಲಾಗಿದೆ.
ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿ.ವೈ.ವಿಜಯೇಂದ್ರ, ''ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ನಿರ್ವಹಣಾ ಸಮಿತಿ ಸಭೆ ಸೇರಿದ್ದೆವು. ಎರಡ್ಮೂರು ದಿನಗಳಿಂದ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಇಬ್ಬರು ವೀಕ್ಷಕರನ್ನು ಕಳಿಸಿದ್ದೆವು. ಅವರಿಂದ ಬಂದಿರುವ ಹೆಸರುಗಳನ್ನು ಸಭೆಯ ಮುಂದೆ ಇಟ್ಟಿದ್ದೇವೆ. ಚರ್ಚಿಸಿದ ಹೆಸರುಗಳನ್ನು ವರಿಷ್ಠರಿಗೆ ಕಳಿಸಲು ತೀರ್ಮಾನಿಸಲಾಗಿದೆ'' ಎಂದರು.
ಇದನ್ನೂ ಓದಿ: ಉಗ್ರರ ಬಗ್ಗೆ ಕಾಂಗ್ರೆಸ್‌ನ ಸಹಾನುಭೂತಿ ಮನೋಭಾವ ಆತಂಕಕಾರಿ : ಆರ್ ಅಶೋಕ್ ಆಕ್ರೋಶ
''ರಾಜ್ಯದಲ್ಲಿ ನಮಗೆ ಉತ್ತಮ ವಾತಾವರಣ ಇದೆ. ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಬೇಕು. 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆ ನಿರ್ಮಾಣಕ್ಕೆ ತೀರ್ಮಾನವಾಗಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ ಹೆಸರುಗಳನ್ನು ಕಳಿಸುತ್ತೇವೆ. ಅಕಾಂಕ್ಷಿಗಳ ಪಟ್ಟಿಯನ್ನು ಕಳುಹಿಸುವುದು ನಮ್ಮ ಕರ್ತವ್ಯ. ಚರ್ಚೆ ಆಗಿರುವ ಎಲ್ಲ ಹೆಸರುಗಳನ್ನೂ ಕಳುಹಿಸಲಾಗುವುದು. ಅದರಲ್ಲಿ ಹಾಲಿ ಸಂಸದರ ಹೆಸರುಗಳೂ ಒಳಗೊಂಡಿವೆ, ಉಳಿದದ್ದನ್ನು ಹೈಕಮಾಂಡ್ ನಿರ್ಧರಿಸಲಿದೆ'' ಎಂದು ತಿಳಿಸಿದರು.
ಲೋಕಸಭಾ ಚುನಾವಣಾ ಪ್ರಭಾರಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್‍ದಾಸ್ ಅಗರ್ವಾಲ್, ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಬಿ.ಶ್ರೀರಾಮುಲು, ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ನಾಳೆ ಬೆಳಗಾವಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ : ಕೋರ್ ಕಮಿಟಿ ಸಭೆಯಲ್ಲಿ ಭಾಗಿ