ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ ಟಿಕೆಟ್ ಹಂಚಿಕೆ ಕುರಿತ ಊಹಾಪೋಹಗಳಿಗೆ ನಾನು ಉತ್ತರ ಕೊಡಲ್ಲ. ಎಂಟು ಸಲ ಗೆದ್ದವರಿಗೂ ಟಿಕೆಟ್ ನೀಡಲಾಗಿದೆ, ಎರಡು ಸಲ ಗೆದ್ದವರಿಗೂ ಟಿಕೆಟ್ ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಪ್ರತಾಪ್ ಸಿಂಹರಿಗೆ ಟಿಕೆಟ್ ಕೈ ತಪ್ಪುತ್ತದೆ ಎಂಬುದೆಲ್ಲಾ ಊಹಾಪೋಹ. ವೀರೇಂದ್ರ ಕುಮಾರ್‌ಗೆ ಎಂಟನೇ ಸಾರಿ ಟಿಕೆಟ್ ಸಿಕ್ಕಿಲ್ವಾ? ಎನ್ನುತ್ತಾ, ಪರೋಕ್ಷವಾಗಿ ತಮಗೆ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.
ಬಿ.ಸಿ.ಪಾಟೀಲರು ಟಿಕೆಟ್‌ಗೆ ಬೇಡಿಕೆಯಿಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದನ್ನು ನಮ್ಮ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಎಲ್ಲರ ಜೊತೆಗೂ ಮಾತನಾಡ್ತಾರೆ. ರಾಷ್ಟ್ರೀಯ ನಾಯಕರು ಟಿಕೆಟ್ ತೀರ್ಮಾನವಾದ ಬಳಿಕ ಸಮಾಧಾನ ಮಾಡುತ್ತಾರೆ. ಮುಂದಿನ ಎರಡು ಮೂರು ದಿನಗಳಲ್ಲಿ ಎಲ್ಲವೂ ಫೈನಲ್ ಆಗಬಹುದು ಎಂದು ತಿಳಿಸಿದರು.
ಎಲ್‌ಇಡಿ ಬಿಜೆಪಿ ಪ್ರಣಾಳಿಕೆ ವಾಹನ ಸಂಚಾರ: 32 ಎಲ್‌ಇಡಿ ಬಿಜೆಪಿ ಪ್ರಣಾಳಿಕೆ ಅಭಿಪ್ರಾಯ ಸಂಗ್ರಹದ ವಾಹನಗಳಲ್ಲಿ ಮೋದಿ ಗ್ಯಾರಂಟಿ, ಇಲ್ಲಿಯವರೆಗಿನ ಅಭಿವೃದ್ಧಿ, ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಸಂಕಲ್ಪಗಳು, ಭಾರತವನ್ನು ಮೂರನೇ ಆರ್ಥಿಕ ಶಕ್ತಿಯಾಗಿ ಮಾಡುವುದು, ವಿಕಸಿತ ಭಾರತವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಪ್ರತೀ ಕ್ಷೇತ್ರದಲ್ಲಿ ಈ ವಾಹನಗಳು ಸಂಚರಿಸಲಿವೆ. ಜನರಿಗೆ ಕೇಂದ್ರ ಸಾಧನೆಗಳನ್ನು ಮನವರಿಕೆ ಮಾಡಲಿವೆ ಎಂದು ಹೇಳಿದರು.
ಏರ್‌ಪೋರ್ಟ್ ಟರ್ಮಿನಲ್: ಹುಬ್ಬಳ್ಳಿ-ಧಾರವಾಡ ಈಗ ಇಂಡಸ್ಟ್ರಿಯಲ್ ಹಬ್ ಆಗಿ ಬೆಳೆಯುತ್ತಿದೆ. ಅದಕ್ಕೆ ಬೇಕಾಗಿರುವ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಉದ್ದೇಶ. ಮುಂಬರುವ ದಿನಗಳಲ್ಲಿ ಏರ್‌ಪೋರ್ಟ್ ಅನ್ನು 340 ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಐದಾರು ವರ್ಷಗಳಲ್ಲಿ ಇನ್ನೊಂದು ಟರ್ಮಿನಲ್ ಅಗತ್ಯವಿದ್ದು, ಈಗಾಗಲೇ ಈ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿನಂತಿ ಮಾಡಿದ್ದೇನೆ. ಎರಡು ಏರೋ ಬ್ರಿಜ್ಗಳು, ಇನ್ನುಳಿದ ಆಧುನಿಕ ಸೌಲಭ್ಯದೊಂದಿಗೆ ಏರ್‌ಪೋರ್ಟ್ ನಿರ್ಮಿಸಲಾಗುತ್ತಿದೆ. ಇನ್ನಷ್ಟು ವಿಮಾನ ಸೇವೆಗಳು ಹುಬ್ಬಳ್ಳಿಯಿಂದ ಆರಂಭವಾಗಲಿವೆ ಎಂದರು.
ಇದನ್ನೂಓದಿ: ಬೆಳಗಾವಿ ಏರ್ಪೋರ್ಟ್ನ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಪ್ರಧಾನಿ ಚಾಲನೆ