ಬೆಂಗಳೂರು: ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನವು ಸೋಮವಾರದಿಂದ ಆರಂಭಗೊಳ್ಳಲಿದ್ದು, ಹಗರಣಗಳ ಅಸ್ತ್ರದೊಂದಿಗೆ ಸರ್ಕಾರದ ವಿರುದ್ಧ ಉಭಯ ಸದನಗಳಲ್ಲಿಯೂ ಏಕ ಕಾಲಕ್ಕೆ ಹೋರಾಟ ನಡೆಸಲು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಿದ್ಧತೆ ನಡೆಸಿವೆ. ದೊಡ್ಡ ಮಟ್ಟದಲ್ಲಿ ಪ್ರತಿಪಕ್ಷಗಳು ಹೋರಾಟಕ್ಕೆ ಸಜ್ಜುಗೊಂಡಿರುವ ಹಿನ್ನಲೆಯಲ್ಲಿ ಕಲಾಪದಲ್ಲಿ ಈ ಬಾರಿ ಗದ್ದಲ, ಗಲಾಟೆಗಳ ಸದ್ದೇ ಹೆಚ್ಚಾಗಿರಲಿದೆ.
ವಿಧಾನಸೌಧದಲ್ಲಿ ಎರಡು ವಾರ ಮುಂಗಾರು ಅಧಿವೇಶನ ನಡೆಯಲಿದೆ. ಸದನದ ಕಾರ್ಯ ಕಲಾಪಗಳ ಪಟ್ಟಿಯೂ ಸಿದ್ಧಗೊಂಡಿದೆ. 12 ದಿನದಲ್ಲಿ ರಜಾ ದಿನ ಕಳೆದರೆ 9 ದಿನ ಕಲಾಪ ಜರುಗಲಿದೆ. ಆದರೆ, ಈ ಬಾರಿಯ ಅಧಿವೇಶನದಲ್ಲಿ ಆಡಳಿಯ ಪಕ್ಷಕ್ಕೆ ಪ್ರತಿಪಕ್ಷಗಳು ಭಾರಿ ದೊಡ್ಡ ಸವಾಲೊಡ್ಡಲು ಸಿದ್ಧತೆ ನಡೆಸಿಕೊಂಡಿವೆ. ಸಾಲು, ಸಾಲು ಹಗರಣಗಳ ಆರೋಪದಲ್ಲಿ ಸಿಲುಕಿರುವ ಸರ್ಕಾರದ ವಿರುದ್ಧ ಮುಗಿಬೀಳಲು ತುದಿಗಾಲಲ್ಲಿ ನಿಂತಿವೆ.
ವಾಲ್ಮೀಕಿ ನಿಗಮದ ಪ್ರಕರಣ: ವಾಲ್ಮೀಕಿ ನಿಗಮದ ಹಗರಣ ಮತ್ತು ಮೈಸೂರಿನ ಮುಡಾ ಹಗರಣದ ಆರೋಪಗಳನ್ನು ಉಭಯ ಸದನದಲ್ಲಿಯೂ ಪ್ರಸ್ತಾಪಿಸಿ ಏಕಕಾಲಕ್ಕೆ ಸರ್ಕಾರವನ್ನು ಹಣಿಯಲು ಬಿಜೆಪಿ, ಜೆಡಿಎಸ್ ನಿರ್ಧರಿದೆ. ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿದ್ದು, ಇಡಿ ಅಧಿಕಾರಿಗಳಿಂದ ಬಂಧನಕ್ಕೂ ಒಳಗಾಗಿದ್ದಾರೆ. ಆದರೆ ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎನ್ನುವುದು ವಿಪಕ್ಷಗಳ ಬೇಡಿಕೆಯಾಗಿದ್ದು, ಇದೇ ಬೇಡಿಕೆಯನ್ನು ಮುಂದಿಟ್ಟು ಸದನದಲ್ಲಿ ಹೋರಾಟ ನಡೆಸಲಿವೆ.
ಮುಡಾ ನಿವೇಶನ ಹಂಚಿಕೆ ಪ್ರಕರಣ: ಇದರ ಜೊತೆ ಮುಡಾ ಪ್ರಕರಣವೂ ಸದನದಲ್ಲಿ ಸದ್ದು ಮಾಡಲಿದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ ವಶಪಡಿಸಿಕೊಂಡ ಜಮೀಜಿಗೆ ಬದಲಾಗಿ 50:50 ಅನುಪಾತ ನಿಯಮದಂತೆ 14 ನಿವೇಶನ ನೀಡಿರುವ ವಿಚಾರ ಚರ್ಚೆಗೆ ಬರಲಿದೆ. ವಾಸ್ತವವಾಗಿ ಎರಡು ನಿವೇಶನ ಮಾತ್ರ ಬೇಡಬೇಕಿದ್ದರೂ 14 ನಿವೇಶನ ನೀಡಿರುವುದರ ಹಿಂದೆ ಅಧಿಕಾರ ದುರ್ಬಳಕೆ ಸ್ಪಷ್ಟವಾಗಿದೆ ಎನ್ನುವ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ತೀರ್ಮಾನಿಸಿವೆ. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಸದನದಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ.
ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ-ಟಿಎಸ್ಪಿ ಹಣ ವಿಚಾರ: ಇದರ ಬೆನ್ನಲ್ಲೇ ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ, ಟಿಎಸ್ಪಿ ಹಣ ಬಳಕೆ ವಿಚಾರವನ್ನೂ ಪ್ರಸ್ತಾಪಿಸಲು ವಿಪಕ್ಷಗಳ ಸಿದ್ಧತೆ ಮಾಡಿಕೊಂಡಿವೆ. ಮೊದಲು 12 ಸಾವಿರ ಕೋಟಿ ಈಗ 12.5 ಸಾವಿರ ಕೋಟಿ ಸೇರಿ 24.5 ಸಾವಿರ ಕೋಟಿ ದಲಿತರ ಯೋಜನೆಗಳಿಗೆ ಬಳಕೆಯಾಗಬೇಕಿದ್ದ ಹಣ ಗ್ಯಾರಂಟಿಗಳಿಗೆ ಬಳಕೆಯಾಗಿದೆ. ಈ ಬಗ್ಗೆ ವರದಿ ನೀಡಲು ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರ ಮುಂದಿಟ್ಟೇ ಹೋರಾಟಕ್ಕೆ ಸಜ್ಜಾಗಿವೆ. ಇದಲ್ಲದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ವಿಫಲವಾಗಿದೆ. ಅಭಿವೃದ್ಧಿ ಯೋಜನೆಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಶಾಸಕರ ಅನುದಾನ ಬಿಡುಗಡೆಯಾಗಿಲ್ಲ ಎನ್ನುವ ವಿಚಾರಗಳ ಪ್ರಸ್ತಾಪಿಸಿ ಹೋರಾಟಕ್ಕೆ ಪ್ರತಿಪಕ್ಷಗಳು ಅಣಿಯಾಗಿವೆ.
ಇದನ್ನೂ ಓದಿ: ದೀರ್ಘಾವಧಿಯಿಂದ ಒಂದೇ ಸ್ಥಳ, ಒಂದೇ ಹುದ್ದೆಯಲ್ಲಿರುವ ಕಂದಾಯ ಅಧಿಕಾರಿಗಳ ಪಟ್ಟಿ ನೀಡಿ: ಡಿಸಿಗಳಿಗೆ ಸರ್ಕಾರದ ಸೂಚನೆ