ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುನಾವಣೆಗೆ ಇಂದು ಮತದಾನ ನಡೆಯಲಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನಕ್ಕೆ ಚುನಾವಣಾ ಆಯೋಗ ಸರ್ವ ಸಿದ್ಧತೆ ಮಾಡಿಕೊಂಡಿದೆ. ಒಟ್ಟು 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.
ಎಲ್ಲೆಲ್ಲಿ ಚುನಾವಣೆ?: ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳು ಹರಡಿಕೊಂಡಿವೆ. ದಾವಣಗೆರೆ, ಶಿವಮೊಗ್ಗ, ಹಾವೇರಿ, ಧಾರವಾಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಾಪುರ, ಕಲಬುರಗಿ, ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶವಿದೆ. ಇಂದು ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಸಿಬ್ಬಂದಿ ಗುರುತಿಸಲ್ಪಟ್ಟ ಸ್ಥಳಗಳಿಂದ ಮತದಾನಕ್ಕೆ ಪೂರಕ ಸಾಮಗ್ರಿಯನ್ನು ನಿರ್ದಿಷ್ಟಪಡಿಸಿದ ಮತಗಟ್ಟೆಗಳಿಗೆ ತೆಗೆದುಕೊಂಡು ಹೋಗಲಿದ್ದಾರೆ.
ಮತಗಟ್ಟೆಗಳಲ್ಲಿ ಮತದಾರರಿಗೆ ಚುನಾವಣಾ ಆಯೋಗ ಮೂಲಸೌಕರ್ಯ ಕಲ್ಪಿಸಿದೆ. ಬಿಸಿಲಿನ ಬೇಗೆಯಿಂದ ಮತದಾನ ಕಡಿಮೆಯಾಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಕುಡಿಯಲು ನೀರು, ಕುಳಿತುಕೊಳ್ಳಲು ಕುರ್ಚಿ, ನೆರಳಿಗೆ ಶಾಮಿಯಾನ ಮತ್ತಿತರ ಸವಲತ್ತುಗಳನ್ನು ಕಲ್ಪಿಸಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ: ಮತದಾನದ ಅವಧಿ ಮುಗಿಯುವವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಹೊರ ರಾಜ್ಯಗಳಿಂದಲೂ ಮದ್ಯ ತರುವಂತಿಲ್ಲ. ಕರ್ನಾಟಕದ ಗಡಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಇತರ ರಾಜ್ಯಗಳ ಮದ್ಯದಂಗಡಿಗಳನ್ನು ಮುಚ್ಚಲು ಸೂಚಿಸಲಾಗಿದೆ.
ಸಾರ್ವತ್ರಿಕ ರಜೆ: ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಸರ್ಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಮತದಾನದ ದಿನ ರಾಜ್ಯ ಸರ್ಕಾರ ಸಾರ್ವತ್ರಿಕ ರಜೆ ಘೋಷಿಸಿದೆ.
28,269 ಮತಗಟ್ಟೆಗಳ ಸ್ಥಾಪನೆ: ಹದಿನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಎಲ್ಲ 14 ಕ್ಷೇತ್ರಗಳಲ್ಲೂ ಸ್ಪರ್ಧಿಸಿವೆ. ಬಿಎಸ್‌ಪಿ 9, ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ 73 ಹಾಗೂ 117 ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಪೈಕಿ 206 ಪುರುಷ, 21 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, "14 ಕ್ಷೇತ್ರಗಳಲ್ಲಿ ಸುಮಾರು 1.45 ಲಕ್ಷ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗುವುದು. 35,000 ಸಿವಿಲ್ ಪೊಲೀಸ್ ಸಿಬ್ಬಂದಿ, ಕೇಂದ್ರ ಅರೆಸೇನಾ ಪಡೆಗಳು ಮತ್ತು ಇತರ ರಾಜ್ಯಗಳ ಸಶಸ್ತ್ರ ಪೊಲೀಸರನ್ನು ನಿಯೋಜಿಸಲಾಗುವುದು" ಎಂದು ಹೇಳಿದರು.
ಇದಲ್ಲದೆ, 4,000 ಮೈಕ್ರೋ ಅಬ್ಸರ್ವರ್‌ಗಳು ಸಹ ಕರ್ತವ್ಯದಲ್ಲಿರಲಿದ್ದಾರೆ. 17,000 ಮತಗಟ್ಟೆಗಳನ್ನು ವೆಬ್‌ಕಾಸ್ಟಿಂಗ್ ಮೂಲಕ ವ್ಯಾಪ್ತಿಗೆ ಒಳಪಡಿಸಲಾಗುವುದು ಎಂದರು.
ಚುನಾವಣಾ ಅಂಕಿಅಂಶಗಳು: ದಾವಣಗೆರೆಯಲ್ಲಿ ಗರಿಷ್ಠ 30 ಅಭ್ಯರ್ಥಿಗಳಿದ್ದರೆ, ಶಿವಮೊಗ್ಗದಲ್ಲಿ 23 ಮತ್ತು ರಾಯಚೂರಿನಲ್ಲಿ ಕನಿಷ್ಠ 8 ಅಭ್ಯರ್ಥಿಗಳಿದ್ದಾರೆ.
ಕಣದಲ್ಲಿರುವ ಪ್ರಮುಖರು: ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ (ಹಾವೇರಿ), ಜಗದೀಶ ಶೆಟ್ಟರ್ (ಬೆಳಗಾವಿ), ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ (ಧಾರವಾಡ) ಮತ್ತು ಭಗವಂತ ಖೂಬಾ (ಬೀದರ್) ಬಿಜೆಪಿಯಿಂದ ಸ್ಪರ್ಧಿಸಿದ್ರೆ, ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್ (ಶಿವಮೊಗ್ಗ), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ ದೊಡ್ಡಮನಿ (ಗುಲ್ಬರ್ಗ) ಕಣದಲ್ಲಿರುವ ಪ್ರಮುಖರು.
ಶಿವಮೊಗ್ಗ ಕದನ ಕುತೂಹಲ: ಶಿವಮೊಗ್ಗದಲ್ಲಿ ಹಿರಿಯ ಬಿಜೆಪಿ ನಾಯಕ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ, ಬಿಜೆಪಿಯಿಂದ ಅಮಾನತುಗೊಂಡಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಣದಲ್ಲಿದ್ದಾರೆ. ಉತ್ತರ ಕನ್ನಡ ಮತ್ತು ಬಳ್ಳಾರಿಯಿಂದ ಕ್ರಮವಾಗಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲು, ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯ್ಕ್ ರಾಯಚೂರಿನಿಂದ ಸ್ಪರ್ಧೆಯಲ್ಲಿದ್ದಾರೆ.