ಚಾಮರಾಜನಗರ: ತಾಯಿ ತವರು, ತಮ್ಮ ಹುಟ್ಟೂರಾದ ಚಾಮರಾಜನಗರ ಜಿಲ್ಲೆಗೆ ಇಂದು ಬಿಗ್ ಬಾಸ್ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ಭೇಟಿ ಕೊಟ್ಟಿದ್ದಾರೆ. ಮರಿಯಾಲ ಮಠ, ಚಾಮರಾಜನಗರದ ವಿರಕ್ತ ಮಠಕ್ಕೆ ಭೇಟಿ ಕೊಟ್ಟು ಗದ್ದುಗೆಗೆ ಪೂಜೆ ಸಲ್ಲಿಸಿದ್ದಾರೆ.
ಬಳಿಕ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆ ನನ್ನ ಹುಟ್ಟೂರು. ತಾಯಿಯ ಊರು ಹೆಗ್ಗೋಠಾರ. ನಾನು ಹುಟ್ಟಿದ್ದು ಹಾಗೂ ಒಂಭತ್ತು ತಿಂಗಳು ಬೆಳೆದದ್ದು ಇದೇ ಜಿಲ್ಲೆಯಲ್ಲಿ. ಬಾಲ್ಯದ ನೆನಪು ಈಗಲೂ ಹಾಗೇ ಇದೆ ಎಂದು ತಿಳಿಸಿದರು.
ಅಣ್ಣಾವ್ರು ಹುಟ್ಟಿದ್ದು ಇದೇ ಜಿಲ್ಲೆಯಲ್ಲಿ. ಅದೇ ನನಗೆ ಹೆಮ್ಮೆ. ಆದ್ರೆ ಒಂದು ಕೊರತೆ ಇದೆ. ಗೆದ್ದ ತಕ್ಷಣ ಅಪ್ಪು ಸರ್ ಅವರ ಆಶೀರ್ವಾದ ಪಡೆಯಬೇಕಿತ್ತು. ಆದ್ರೆ ಅದು ಸಾಧ್ಯವಿಲ್ಲ. ಈ ವಿಚಾರ ಬೇಸರ ತಂದಿದೆ ಎಂದು ದಿ. ಪುನೀತ್ ರಾಜ್ಕುಮಾರ್ ಅವರನ್ನು ನೆನೆದರು.
ನನ್ನ ಗೆಲುವಿಗೆ ಜಿಲ್ಲೆ ಸೇರಿದಂತೆ ಇಡೀ ಕರ್ನಾಟಕದ ಜನತೆ ಆಶೀರ್ವಾದ ಮಾಡಿದ್ದರು. ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದ ಎಲ್ಲರೂ ಗೆದ್ದಿದ್ದೇವೆ. ನಮ್ಮ ವ್ಯಕ್ತಿತ್ವವನ್ನ ಬಿಗ್ ಬಾಸ್ ವೇದಿಕೆ ಹಾಗೂ ಸುದೀಪ್ ಸರ್ ಹೊರ ತಂದಿದ್ದಾರೆ ಎಂದು ತಿಳಿಸಿದರು.
ಬಿಗ್ ಬಾಸ್ನಲ್ಲಿ ಏನೇ ನಡೆದಿದ್ದರೂ ಎಲ್ಲರ ಜೊತೆ ಸ್ನೇಹ ಬೆಳೆಸಿಕೊಳ್ಳುತ್ತೇನೆ. ನನಗೆ ಸಾಕಷ್ಟು ಆಫರ್ಗಳು ಬಂದಿವೆ. ಕಥೆ ನೋಡಿ ಆಯ್ಕೆ ಮಾಡಬೇಕಾಗಿದೆ. ಜನರು ನನಗೆ ಹೆಚ್ಚು ಮತಗಳನ್ನು ನೀಡಿ ಹೆಚ್ಚಿನ ಜವಾಬ್ದಾರಿಯನ್ನು ನನ್ನ ಮೇಲೆ ಹಾಕಿದ್ದಾರೆ ಎಂದು ತಿಳಿಸಿದರು. ನನ್ನ ಬಗ್ಗೆ ಯಾವುದೇ ನೆಗಿಟಿವ್ ಟ್ರೋಲ್ ಆಗಿಲ್ಲ. ಮಾಡಿದವರು, ಮಾಡುವವರು ಮಾಡಲಿ. ನನ್ನ ಕೆಲಸ ನಾನು ಮಾಡುತ್ತೇನೆ. ಬಿಗ್ ಬಾಸ್ ಒಂದು ದೊಡ್ಡ ವೇದಿಕೆ. ಎಲ್ಲರ ವ್ಯಕ್ತಿತ್ವವನ್ನ ಹೊರತರುವ ರಿಯಾಲಿಟಿ ಶೋ ಅದಾಗಿದೆ. ನಾವು ಯಾರೂ ಕೂಡ ಅಲ್ಲಿ ಯಾವುದೇ ಪಾತ್ರ ಮಾಡಲಿಲ್ಲ. ನಮ್ಮ ವ್ಯಕ್ತಿತ್ವವನ್ನು ಹೊರ ಹಾಕಿದೆವು ಎಂದು ತಿಳಿಸಿದರು.
ಇದನ್ನೂ ಓದಿ: ಹಂಪಿ ಉತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ 'ಪುಷ್ಪವತಿ' ನಿಮಿಕಾ ರತ್ನಾಕರ್
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ರ ಗ್ರ್ಯಾಂಡ್ ಫಿನಾಲೆ ಕಳೆದ ಶನಿವಾರ - ಭಾನುವಾರ ಸಂಜೆ ಪ್ರಸಾರ ಕಂಡಿತ್ತು. ಭಾನುವಾರ ರಾತ್ರಿ ವಿಜೇತರ ಹೆಸರು ಘೋಷಣೆಯಾಯಿತು. ಬಿಗ್ ಬಾಸ್ ಸೀಸನ್ 10ರ ವಿಜೇತರಾಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ಬಿಗ್ ಬಾಸ್ ಟ್ರೋಫಿ, 50 ಲಕ್ಷ ರೂಪಾಯಿ, ಒಂದು ಮಾರುತಿ ಬ್ರೀಝಾ ಕಾರು, ಸ್ಕೂಟರ್ ಅನ್ನು ಬಹುಮಾನವಾಗಿ ಪಡೆದಿರೋ ಕಾರ್ತಿಕ್ ಸದ್ಯ ಅಭಿಮಾನಿಗಳನ್ನು ಭೇಟಿ ಆಗುತ್ತಿದ್ದಾರೆ.
ಇದನ್ನೂ ಓದಿ: 'I am alive': ನಾನು ಜೀವಂತವಾಗಿದ್ದೇನೆಂದು ಹೇಳಿಕೊಂಡ ನಟಿ ಪೂನಂ ಪಾಂಡೆ