ಬೆಂಗಳೂರು: ಇಬ್ಬರು ಬಾಲಕಿಯರನ್ನ ಹತ್ಯೆ ಮಾಡಿರುವ ಮಲತಂದೆ ಸುಮಿತ್ನನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹತ್ಯೆಯ ಬಳಿಕ ಪರಾರಿಯಾಗಲು ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಆರೋಪಿಯನ್ನ ಭಾನುವಾರ ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಫೋನ್ ಆನ್ ಮಾಡಿ ಸಿಕ್ಕಿಬಿದ್ದ ಆರೋಪಿ: ಆಗಸ್ಟ್ 24 ರಂದು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಬಳಿಕ ಪ್ರಕರಣ ದಾಖಲಾಗುತ್ತಿದ್ದಂತೆ ಆಗಸ್ಟ್ 25 ರಂದು ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಬೆಂಗಳೂರಿನಿಂದ ಪರಾರಿಯಾಗಲು ಆರೋಪಿ ನಿನ್ನೆ ರಾತ್ರಿ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಈ ವೇಳೆ ಟ್ರೈನ್ ಟಿಕೆಟ್ ಖರೀದಿಗಾಗಿ ತನ್ನ ಮೊಬೈಲ್ ಆನ್ ಮಾಡಿದ್ದ. ಆರೋಪಿಯ ಜಾಡು ಹಿಡಿದು ಹೊರಟಿದ್ದ ಪೊಲೀಸರು ತಕ್ಷಣವೇ ಆತನ ಮೊಬೈಲ್ ಟ್ರೇಸ್ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕಿಯರನ್ನ ಕತ್ತು ಸೀಳಿ ಹತ್ಯೆಗೈದ ಘಟನೆ ಆಗಸ್ಟ್ 24ರಂದು ಅಮೃತಹಳ್ಳಿ ಠಾಣೆ ವ್ಯಾಪ್ತಿಯ ಕಾವೇರಿ ಲೇಔಟ್‌ನಲ್ಲಿ ನಡೆದಿತ್ತು. 14 ಮತ್ತು 16 ವರ್ಷದ ಸಹೋದರಿಯರನ್ನ ಆರೋಪಿ ಮಲತಂದೆ ಸುಮಿತ್ ಹತ್ಯೆಗೈದಿದ್ದ. ಕಳೆದ ಒಂದು ವರ್ಷದಿಂದ ಪತ್ನಿ ಹಾಗೂ ಮಕ್ಕಳೊಂದಿಗೆ ದಾಸರಹಳ್ಳಿಯ ಕಾವೇರಿ ಲೇಔಟ್‌ನಲ್ಲಿ ವಾಸವಿದ್ದ ಸುಮಿತ್, ಇತ್ತೀಚಿಗೆ ಪತ್ನಿ ಹಾಗೂ ಮಕ್ಕಳ ಬಗ್ಗೆ ಶಂಕಿಸಿ ಜಗಳವಾಡುತ್ತಿದ್ದ. ಆಗಸ್ಟ್ 24ರಂದು ಜಗಳ ವಿಕೋಪಕ್ಕೆ ತಿರುಗಿದಾಗ ಮಕ್ಕಳಿಬ್ಬರನ್ನ ಹತ್ಯೆ ಮಾಡಿ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಅಪ್ರಾಪ್ತ ಮಕ್ಕಳನ್ನು ಮಲತಂದೆ ಸುಮಿತ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಮಕ್ಕಳ ತಂದೆ ಅನಿತಾ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುತ್ತಿದ್ದು, ಸುಮಿತ್ ಫುಡ್ ಡೆಲಿವರಿ ಬಾಯ್ ಆಗಿದ್ದಾನೆ. ಉತ್ತರ ಪ್ರದೇಶ ಮೂಲದ ಕುಟುಂಬ ಇದಾಗಿದೆ ಎಂದು ಎಂದು ಪ್ರಕರಣ ಸಂಬಂಧ ಈಶಾನ್ಯ ವಿಭಾಗ ಡಿಸಿಪಿ ಸಜೀತ್ ಶನಿವಾರ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಬೆಂಗಳೂರು: ಇಬ್ಬರು ಹೆಣ್ಣುಮಕ್ಕಳನ್ನ ಕೊಚ್ಚಿ ಕೊಂದ ಮಲತಂದೆ! - Stepfather Murdered daughters