ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಕಣಕ್ಕಿಳಿದಿರುವ ತೇಜಸ್ವಿ ಸೂರ್ಯ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರಾಜಯಗೊಂಡಿದ್ದಾರೆ.
ತೇಜಸ್ವಿ ಸೂರ್ಯ ಅವರು 7,27,537 ಮತಗಳು ಹಾಗೂ ಸೌಮ್ಯ ರೆಡ್ಡಿ 4,59,460 ಮತಗಳನ್ನು ಪಡೆದಿದ್ದಾರೆ. 2,68,077 ಮತಗಳ ಅಂತರದಲ್ಲಿ ಬಿಜೆಪಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದೆ. ಇಬ್ಬರು ಯುವ ರಾಜಕಾರಣಿಗಳ ಸ್ಪರ್ಧೆಯಿಂದಲೇ ಬೆಂಗಳೂರು ದಕ್ಷಿಣ ಕ್ಷೇತ್ರ ಎಲ್ಲರ ಗಮನ ಸೆಳೆದಿತ್ತು.
ಬಿಜೆಪಿಯಿಂದ ತೇಜಸ್ವಿ ಸೂರ್ಯ ಮತ್ತು ಕಾಂಗ್ರೆಸ್ನಿಂದ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಹಾಗೂ ಮಾಜಿ ಶಾಸಕಿ ಸೌಮ್ಯರೆಡ್ಡಿ ಸ್ಪರ್ಧೆಯಿಂದ ಫಲಿತಾಂಶ ತೀವ್ರ ಕುತೂಹಲ ಮೂಡಿಸಿತ್ತು. ಸದ್ಯ ಮತ ಎಣಿಕೆ ಕಾರ್ಯ ಮುಗಿದಿದ್ದು, ತೇಜಸ್ವಿ ಸೂರ್ಯ ಗೆಲುವು ಕಂಡಿದ್ದು, ಸೌಮ್ಯರೆಡ್ಡಿ ಸೋಲನುಭವಿಸಿದ್ದಾರೆ.
ಭರ್ಜರಿ ಪ್ರಚಾರ: ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಮಾಡಿದ್ದರು. ಪ್ರಧಾನಿ ಮೋದಿ ಗ್ಯಾರಂಟಿಯೊಂದಿಗೆ ಹಾಲಿ ಸಂಸದ ತೇಜಸ್ವಿ ಸೂರ್ಯ ಮತಬೇಟೆ ನಡೆಸಿದ್ದರು. ಗ್ಯಾರಂಟಿ ಅಲೆಯ ಜತೆಗೆ ಅಪ್ಪ ಹೆಣೆದ ರಣತಂತ್ರದಡಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಮತಯಾಚಿಸಿದ್ದರು.
ಮತದಾರರು: 8 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರಕ್ಕೆ ಏ.26 ರಂದು ನಡೆದ ಚುನಾವಣೆಯಲ್ಲಿ ಶೇ. 53.49 ಮತದಾನ ದಾಖಲಾಗಿತ್ತು. ಈ ಕ್ಷೇತ್ರದಲ್ಲಿ ಒಟ್ಟು 21 ಲಕ್ಷದ 41 ಸಾವಿರದ 895 ಮತದಾರರಿದ್ದಾರೆ.
ಬಿಜೆಪಿ ಭದ್ರಕೋಟೆ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದೆ. ಈವರೆಗೆ ನಡೆದಿರುವ 13 ಚುನಾವಣೆಗಳಲ್ಲಿ ಕಾಂಗ್ರೆಸ್ ಕೇವಲ ಎರಡು ಬಾರಿ ಮಾತ್ರ ಗೆದ್ದಿದೆ. (JNP 2 ಬಾರಿ ಮತ್ತು BLD 1 ಬಾರಿ ಗೆದ್ದಿದೆ) 1991 ರಿಂದ 2019 ಮತ್ತು 2024ರಲ್ಲಿ ಸತತವಾಗಿ ಬಿಜೆಪಿ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದಿದೆ. ವೆಂಕಟಗಿರಿಗೌಡ ಬಿಜೆಪಿಗೆ ಮೊದಲ ಗೆಲುವು ತಂದರೆ ನಂತರ ಅನಂತ್ ಕುಮಾರ್ ಸತತವಾಗಿ 6 ಬಾರಿ ಆಯ್ಕೆಯಾಗಿದ್ದರು. ಅವರ ನಿಧನದ ನಂತರ 2019ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು. ಈಗ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದ್ದಾರೆ.
ಇದನ್ನೂ ಓದಿ: ಮಂಡ್ಯ ಲೋಕಸಭಾ ಕ್ಷೇತ್ರ: ಗೆಲುವಿನ ನಗೆ ಬೀರಿದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ - HD Kumaraswamy