ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಒಟ್ಟು 2.29 ಕೋಟಿ ರೂ. ಆಸ್ತಿ ಒಡೆಯರಾಗಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಇಂದು ನಾಮಪತ್ರ ಸಲ್ಲಿದರು. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದ ಅಫಿಡವಿಟ್‌ನಲ್ಲಿ ಸ್ಥಿರಾಸ್ತಿ, ಚರಾಸ್ತಿ ಸೇರಿ ತಮ್ಮ ಬಳಿ ಒಟ್ಟು 2.29 ಕೋಟಿ ರೂ. ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಈ ಪೈಕಿ 1.01 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗು 1.28 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.
2022-23ರಲ್ಲಿ ವಾರ್ಷಿಕ ಆದಾಯ 17.39 ಲಕ್ಷ ರೂ. ಇದೆ ಎಂದು ಘೋಷಿಸಿದ್ದಾರೆ. ನಗದು ರೂಪದಲ್ಲಿ 44,135 ರೂ. ಹೊಂದಿರುವ ಇವರು, ಬ್ಯಾಂಕ್ ಖಾತೆಯಲ್ಲಿ 40,96,352 ರೂ. ಹಣ ಹೊಂದಿದ್ದಾರೆ. 19.85 ಲಕ್ಷ ರೂ. ಮೌಲ್ಯದ ಒಂದು ಇನ್ನೋವಾ ಕಾರು, 5 ಕೆಜಿ ಬೆಳ್ಳಿ, 950 ಗ್ರಾಂ ಚಿನ್ನ ಸೇರಿದಂತೆ 28.02 ಲಕ್ಷ ರೂ. ಮೌಲ್ಯದ ಒಡವೆ ಇದೆ. ಬೇಗೂರು ಬಳಿ 1.24 ಲಕ್ಷ ಮೌಲ್ಯದ ಪ್ಲಾಟ್ ಕೂಡ ಇದೆ.
ಒಟ್ಟು 1.50 ಕೋಟಿ ರೂ. ಸಾಲ, ಮುಂಗಡ ಸೇರಿ ಹೊಣೆಗಾರಿಕೆ ಹೊಂದಿದ್ದಾರೆ. ತಮ್ಮ ತಂದೆ ಸಚಿವ ರಾಮಲಿಂಗಾ ರೆಡ್ಡಿಯಿಂದ 56.28 ಲಕ್ಷ ರೂ. ಸಾಲ ಪಡೆದುಕೊಂಡಿರುವುದಾಗಿ ಅಪಿಢವಿಟ್‌ನಲ್ಲಿ ಘೋಷಿಸಿದ್ದಾರೆ. ಸಾರ್ವಜನಿಕ ಆಸ್ತಿ ಹಾನಿ, ಕೋವಿಡ್ ನಿಯಮ ಉಲ್ಲಂಘನೆ ಸೇರಿದಂತೆ 6 ಪ್ರಕರಣಗಳು ಇವರ ಮೇಲಿದೆ. ಎಲ್ಲಾ ಪ್ರಕರಣಗಳು ವಿವಿಧ ಕೋರ್ಟ್‌ನಲ್ಲಿ ವಿಚಾರಣೆಯ ಹಂತಗಳಲ್ಲಿದೆ.