ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಶಂಕಿತ ಆರೋಪಿಯ ಹಿಂದೆ ಬಿದ್ದಿರುವ ಪೊಲೀಸರಿಗೆ ಸಮಯದ ಅಂತರ ತಲೆನೋವಾಗಿದೆ. ಈ ಕೃತ್ಯದ ಸಂದರ್ಭದಲ್ಲಿ ಆರೋಪಿ ಸಮಯವನ್ನು ಬಳಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಆತನನ್ನು ಪತ್ತೆ ಹಚ್ಚುವುದು ಹೆಚ್ಚು ಸವಾಲಾಗುತ್ತಿದೆ.
ಶುಕ್ರವಾರ ಬೆಳಗ್ಗೆ 11:30ರ ಸುಮಾರಿಗೆ ಐಟಿಪಿಎಲ್ ಮುಖ್ಯರಸ್ತೆಯ ರಾಮೇಶ್ವರಂ ಕೆಫೆಗೆ ಬಂದಿರುವ ಶಂಕಿತ ಆರೋಪಿ, ರವೆ ಇಡ್ಲಿ ಆರ್ಡರ್ ಮಾಡಿ ತಿಂದಿದ್ದಾನೆ. ಬಳಿಕ ಕೆಲವೇ ನಿಮಿಷಗಳ ಅಂತರದಲ್ಲಿ ಸ್ಫೋಟಕವಿದ್ದ ಬ್ಯಾಗ್ ಅನ್ನು ವಾಶ್ ಬೇಸಿನ್ ಬಳಿ ಇರಿಸಿ ಅಲ್ಲಿಂದ ತೆರಳಿದ್ದಾನೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸ್ಫೋಟ ಸಂಭವಿಸಿದೆ. ಸ್ಫೋಟಕ ಇರಿಸಿದ ನಂತರದ ಸುಮಾರು 1 ಗಂಟೆ 30 ನಿಮಿಷ ಶಂಕಿತನಿಗೆ ತಪ್ಪಿಸಿಕೊಳ್ಳುವ ಅವಕಾಶ ದೊರೆತಿದೆ. ಅಲ್ಲದೆ ಆರಂಭದಲ್ಲಿ ಇದೊಂದು ಸಿಲಿಂಡರ್ ಸ್ಫೋಟ ಎಂದೇ ಭಾವಿಸಿದ್ದರಿಂದ ಶಂಕಿತನಿಗೆ ತಪ್ಪಿಸಿಕೊಳ್ಳಲು ಸಾಕಷ್ಟು ಸಮಯ ಸಿಕ್ಕಿದೆ.
ನಂತರ ನಡೆದ ತನಿಖೆಯಲ್ಲಿ ಇದೊಂದು 'ಪೂರ್ವನಿಯೋಜಿತ ಸಂಚು' ಎಂದು ಬಯಲಾದ ಬಳಿಕ ಪೊಲೀಸ್ ತನಿಖೆ ಆರಂಭವಾಗಿದೆ. ಕೆಫೆ ಹಾಗೂ ಅದರ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಲಾಗಿತ್ತು. ಇದೆಲ್ಲದರ ಲಾಭ ಪಡೆದಿರುವ ಆರೋಪಿ ಸಮಯ ಬಳಸಿಕೊಂಡು ಅನ್ಯರಾಜ್ಯಕ್ಕೆ ತೆರಳಿರುವ ಶಂಕೆ ಮೂಡಿದೆ. ಆದ್ದರಿಂದ ಕರ್ನಾಟಕದ ಗಡಿ ಭಾಗಗಳು ಮಾತ್ರವಲ್ಲದೆ ದಕ್ಷಿಣದ ಎಲ್ಲಾ ರಾಜ್ಯಗಳಿಗೂ ಸಿಸಿಬಿ ಪೊಲೀಸರ ತಂಡಗಳು ತೆರಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಬಾಂಬ್ ಸ್ಫೋಟಕ್ಕೂ ಮುನ್ನ ಶಂಕಿತ ಬ್ಯಾಗ್ ಸಮೇತ ಓಡಾಡಿದ್ದಾನೆ. ಈತನ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಮುಖ ಕಾಣದಂತೆ ಕ್ಯಾಪ್ ಧರಿಸಿ ಓಡಾಡಿದ್ದು ಕಂಡುಬಂದಿದೆ. ಆತ ಉಳಿದುಕೊಂಡಿದ್ದ ಸ್ಥಳ, ಓಡಾಟ ನಡೆಸಿರುವ ರಸ್ತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪೊಲೀಸರು ಶನಿವಾರ ಪರಿಶೀಲಿಸಿದ್ದಾರೆ. ಹಾಗೆಯೇ ಬಾಂಬ್ ಇಡುವ ಮುನ್ನ ಆರೋಪಿ ಬಿಎಂಟಿಸಿ ಬಸ್ನಲ್ಲಿ ಬಂದಿದ್ದ ಎಂಬುದು ತಿಳಿದುಬಂದಿದೆ. ಹೀಗಾಗಿ ಆ ಅವಧಿಯಲ್ಲಿ ಸಂಚರಿಸಿದ ಸುಮಾರು 28 ಬಸ್ಗಳಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.
ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವ ಸಾಧ್ಯತೆ ದಟ್ಟವಾಗಿದೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಕೆಫೆಯಲ್ಲಿ ನಡೆದ ಸ್ಫೋಟಕ್ಕೂ ಸಾಮ್ಯತೆ ಕಂಡುಬಂದಿರುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಈಗಾಗಲೇ ತಿಳಿಸಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ: ಯುವಕನ ಜೀವ ಉಳಿಸಿದ ಅಮ್ಮನ ಫೋನ್ ಕರೆ, ’MOM=GOD’