ಬೆಂಗಳೂರು: ''ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವು ಬೆಂಗಳೂರಿನಲ್ಲಿ ಶಾಂತಿಯುತವಾಗಿ ನಡೆದಿದ್ದು, ಜೂನ್ 4ರ ವರೆಗೂ ಮತಯಂತ್ರಗಳು ಸ್ಟ್ರಾಂಗ್ ರೂಮ್ಗಳಲ್ಲಿ ಭದ್ರವಾಗಿರಲಿವೆ'' ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
''ಇಡೀ ನಗರದಲ್ಲಿ ಶಾಂತಿಯುತವಾಗಿ ಮತದಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಕೆಲವೆಡೆ ತಾಂತ್ರಿಕ ಲೋಪ ದೋಷಗಳು, ಕೆಲ ಪಕ್ಷದ ಕಾರ್ಯಕರ್ತರು ಹಾಗೂ ಮತಗಟ್ಟೆ ಸಿಬ್ಬಂದಿ ನಡುವಿನ ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿದರೆ ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ಮುಗಿದಿದೆ'' ಎಂದು ಆಯುಕ್ತರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಮತದಾನದ ಬಳಿಕ ಇವಿಎಂ ಯಂತ್ರಗಳನ್ನು ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ. ಜೂನ್ ನಾಲ್ಕರವರೆಗೂ ಕೇಂದ್ರೀಯ ಭದ್ರತಾ ಪಡೆಗಳು ಹಾಗೂ ಸ್ಥಳೀಯ ಪೊಲೀಸರು ಅವುಗಳಿಗೆ ಭದ್ರತೆ ವಹಿಸಲಿದ್ದಾರೆ'' ಎಂದು ಹೇಳಿದರು.