ಬೆಂಗಳೂರು: ಕರ್ನಾಟಕ ಪ್ರದೇಶ ಜನತಾದಳ-ಜಾತ್ಯತೀತ (ಜೆಡಿಎಸ್) ಪಕ್ಷದ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ಉಚ್ಚಾಟನೆ ಮಾಡಿರುವ ಕ್ರಮ ಹಾಗೂ ನೂತನ ರಾಜ್ಯಾಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ನೇಮಕವನ್ನು ಪ್ರಶ್ನಿಸಿ ಸಿಎಂ ಇಬ್ರಾಹಿಂ ಅವರು ಸಲ್ಲಿಸಿದ್ದ ಅರ್ಜಿಯನ್ನು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ವಜಾ ಮಾಡಿದೆ.
ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದಿಂದ ಇಬ್ರಾಹಿಂ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು ಉಚ್ಚಾಟನೆ ಮಾಡಿದ್ದರು. ಜೆಡಿಎಸ್ ವರಿಷ್ಠ ಕ್ರಮ ಪ್ರಶ್ನಿಸಿ ಇಬ್ರಾಹಿಂ ಅವರು ಸಿವಿಲ್ ಕೋರ್ಟ್ ಮೆಟ್ಟಿಲೇರಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡ ಅವರು ನಿಯಮಗಳಿಗೆ ವಿರುದ್ಧವಾಗಿ ತಮ್ಮನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ವಜಾ ಮಾಡಿದ್ದಾರೆ. ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರನ್ನೂ ಪಕ್ಷದ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂದು ಇಬ್ರಾಹಿಂ ಅವರು ದೂರಿದ್ದರು. ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಾಲಯವು, ಇಬ್ರಾಹಿಂ ಅವರ ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಕುಮಾರಸ್ವಾಮಿ ಅವರ ನೇಮಕವನ್ನು ಪುರಸ್ಕರಿಸಿದೆ.
ಇಬ್ರಾಹಿಂ ಕಾನೂನು ಹೋರಾಟ: ರಾಜ್ಯಾಧ್ಯಕ್ಷ ಸೇರಿದಂತೆ ರಾಜ್ಯ ಕಾರ್ಯಕಾರಿ ಸಮಿತಿಯನ್ನು ವಿಸರ್ಜಿಸಿ 2023ರ ಅಕ್ಟೋಬರ್ 19ರಂದು ತೆಗೆದುಕೊಂಡ ನಿರ್ಣಯ ಹಾಗೂ ಅದೇ ದಿನ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಹಂಗಾಮಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಹಾಗೂ ತಮ್ಮನ್ನು ಅಮಾನತುಗೊಳಿಸಿ ನವೆಂಬರ್ 16ರಂದು ಕೈಗೊಂಡ ನಿರ್ಣಯವನ್ನು ಕೋರ್ಟ್ನಲ್ಲಿ ಇಬ್ರಾಹಿಂ ಪ್ರಶ್ನಿಸಿದ್ದರು. ಅರ್ಜಿಯಲ್ಲಿ ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರತಿವಾದಿಗಳನ್ನಾಗಿಸಿದ್ದಾರೆ. ಜೆಡಿಎಸ್ ಕೈಗೊಂಡ ಈ ಎಲ್ಲಾ ನಿರ್ಣಯಗಳು ಏಕಪಕ್ಷೀಯ ಹಾಗೂ ಕಾನೂನುಬಾಹಿರವಾಗಿವೆ. ಪಕ್ಷದ ಸಂವಿಧಾನ ಮತ್ತು ಸಹಜ ನ್ಯಾಯತತ್ವಕ್ಕೆ ವಿರುದ್ಧವಾಗಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಇಬ್ರಾಹಿಂ ವಿರುದ್ಧ ಜೆಡಿಎಸ್ ಆದೇಶ? ಪಕ್ಷ ವಿರೋಧಿ ಚಟುವಟಿಕೆಗಳ ಹಿನ್ನೆಲೆ ಸಿಎಂ ಇಬ್ರಾಹಿಂ ಅವರನ್ನು ಕೂಡಲೇ ಜಾರಿಗೆ ಬರುವಂತೆ ಜಾತ್ಯತೀತ ಜನತಾದಳ ಪಕ್ಷದಿಂದ ಅಮಾನತು ಮಾಡಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್. ಡಿ ದೇವೇಗೌಡರು ಆದೇಶ ಹೊರಡಿಸಿದ್ದಾರೆ.
ಪಕ್ಷದ ಹಿತದೃಷ್ಠಿಯಿಂದ ಮತ್ತು ಪಕ್ಷ ಸಂಘಟನೆ, ಬಲವರ್ದನೆಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಮೈತ್ರಿ ಮಾಡಿಕೊಳ್ಳಬೇಕು ಎಂಬ ವಿಚಾರದ ಬಗ್ಗೆ ಸರ್ವಾನುಮತದಿಂದ ಪಕ್ಷದ ಸಭೆಗಳಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಹೊಂದಾಣಿಕೆ ಬಗ್ಗೆ ಬಿಜೆಪಿ ಮುಖಂಡರೊಂದಿಗೆ ಚರ್ಚಿಸಲು ಪಕ್ಷ ರಾಷ್ಟ್ರಾಧ್ಯಕ್ಷರು, ರಾಜ್ಯಾಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರಿಗೆ ಅಧಿಕಾರ ನೀಡಲು ತೀರ್ಮಾನಿಸಲಾಗಿದೆ. ಈ ಮೇಲಿನ ಸಭೆಗಳಲ್ಲಿ ಸಿಎಂ ಇಬ್ರಾಹಿಂ ಅವರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಮತ್ತು ತೀರ್ಮಾನದಲ್ಲಿ ಪಾಲುದಾರರಾಗಿದ್ದರು. ನಂತರ ಈ ತೀರ್ಮಾನದ ವಿರುದ್ಧ ವಿರೋಧಾಭಾಸದ ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಸಂವಿಧಾನದ ಸೆಕ್ಷನ್ 10 ರನ್ವಯ ವಿಸರ್ಜನೆ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರು ಆದೇಶದಲ್ಲಿ ತಿಳಿಸಿದ್ದರು.
ಇದನ್ನೂ ಓದಿ: ಜೆಡಿಎಸ್‌ನಿಂದ ಉಚ್ಚಾಟನೆ ಪ್ರಶ್ನಿಸಿ ಕೋರ್ಟ್ ಮೊರೆ ಹೋದ ಸಿಎಂ ಇಬ್ರಾಹಿಂ