ಬೆಂಗಳೂರು: ಬಿಜೆಪಿಯಲ್ಲಿ ಬಗೆದಷ್ಡು ಲೆಕ್ಕ ಹಾಕದಷ್ಡು ಹಗರಣಗಳಿವೆ. ಇದೆಲ್ಲವನ್ನೂ ನಾನು ಹೇಳುತ್ತೇನೆ ಎಂದು ಗಲಾಟೆ ಮಾಡ್ತಿದ್ದಾರೆ. ಇವರನ್ನು ಕಳ್ಳರು, ಲೂಟಿಕೋರರು ಎಂದು ಜನರು ಪ್ರತಿಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ನಾನು ಜಗ್ಗಲ್ಲ, ಬಗ್ಗಲ್ಲ. ನಿಮ್ಮ ಎಲ್ಲ ಹಗರಣಗಳ ತನಿಖೆ ಮಾಡಿಸಿ, ನಿಮ್ಮನ್ನು ಬಗ್ಗು ಬಡಿದು, ತಪ್ಪು ಮಾಡಿದವರನ್ನು ಜೈಲಿಗೆ ಕಳುಹಿಸೇ ಕಳುಹಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಶಪಥ ಮಾಡಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಧರಣಿ ನಡುವೆ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ ಸಂಬಂಧ ಉತ್ತರ ನೀಡುತ್ತಾ, ನಿಮ್ಮನ್ನು ಕಳ್ಳರು, ಲೂಟಿಕೋರರು ಅಂತಾ ಜನ ವಿಪಕ್ಷದಲ್ಲಿರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಾವು 136 ಸ್ಥಾನ ಗೆದ್ದಿದ್ದೇವೆ. ನಿಮಗೆ 60 ಸ್ಥಾನ ಸಿಕ್ಕಿದೆ. ನಾವು ಯಾವುದಕ್ಕೂ ಬಗ್ಗುವುದಿಲ್ಲ. ಎಲ್ಲ ಹಗರಣ ತನಿಖೆ ಮಾಡಿಸಿ ತಪ್ಪು ಮಾಡಿದವರನ್ನು ಜೈಲಿಗೆ ಕಳುಹಿಸದೇ ಬಿಡಲ್ಲ. ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆ ಆಗುತ್ತದೆ. ಹಿಂದೆ ಇಡಿ ಅಧಿಕಾರಿಗಳು ಬರಲಿಲ್ಲ. ಈಗ ಶುರು ಮಾಡಿದ್ದಾರೆ. ಇಡಿ, ಬಿಜೆಪಿಗೆ ನಾವು ಭಯಪಡಲ್ಲ. ನನ್ನ ಹೆಸರು ಹೇಳದಿದ್ದರೆ ಬಿಜೆಪಿಯವರಿಗೆ ತಿಂದಿದ್ದು ಜೀರ್ಣ ಆಗಲ್ಲ. ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂತಾ ಭಜನೆ ಮಾಡಿ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರದ ಹಗರಣ ಬಿಚ್ಚಿಟ್ಟ ಸಿಎಂ : ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ 21 ಹಗರಣಗಳ ಬಗ್ಗೆ ಸಿಎಂ ಸದನದಲ್ಲಿ ಲಿಖಿತ ರೂಪದಲ್ಲಿ ಬಿಚ್ಚಿಟ್ಟರು. ಪ್ರತಿಪಕ್ಷದ ಸದಸ್ಯರ ಧರಣಿ, ಘೋಷಣೆ ಮಧ್ಯೆಯೇ ಪಟ್ಟಿ ಓದಿದ ಸಿಎಂ ಸಿದ್ದರಾಮಯ್ಯ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 42.16 ಕೋಟಿ ರೂ. ಎಪಿಎಂಸಿ ಹಗರಣವಾಗಿದೆ. ಈ ವೇಳೆ ಬಸವರಾಜ ಬೊಮ್ಮಾಯಿ ಮಂತ್ರಿಯಾಗಿದ್ದರು. ಇನ್ನು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದರು. ಕೋಟ ಶ್ರೀನಿವಾಸ ಪೂಜಾರಿ ಮಂತ್ರಿಯಾಗಿದ್ದಾಗ ಭೋವಿ ನಿಗಮದಲ್ಲಿ 87 ಕೋಟಿ ರೂ. ಹಗರಣವಾಗಿದೆ ಎಂದರು. ಇನ್ನು ದೇವರಾಜ ಅರಸು ಟ್ರಕ್ ಟರ್ಮಿನಲ್ ನಲ್ಲಿ 47.10 ಕೋಟಿ ರೂ. ಹಗರಣವಾಗಿತ್ತು. ಅದಕ್ಕೆ ಅಧ್ಯಕ್ಷರಾಗಿದ್ದ ವೀರಯ್ಯ ಬಂಧನವಾಗಿದ್ದರೂ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿದರು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿ ಬೇರೆ ನಿಗಮಗಳಲ್ಲಿ 437 ಕೋಟಿ ರೂ. ಹಗರಣವಾಗಿದೆ ಎಂದು ವಿವರಿಸಿದರು.
ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸಚಿವರಾಗಿದ್ದಾಗ ಕಿಯೋನಿಕ್ಸ್ನಲ್ಲಿ 500 ಕೋಟಿ ರೂ. ಹಗರಣ ನಡೆದಿದೆ. ಬಿಜೆಪಿ ಅವಧಿಯಲ್ಲಿನ ಹಗರಣದ ಬಗ್ಗೆ ಸಿಐಡಿ ತನಿಖೆಯಲ್ಲಿ ಉಲ್ಲೇಖವಾಗಿದೆ. ಕೋವಿಡ್ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ. ಹಗರಣವಾಗಿದೆ ಎಂದು ಶಾಸಕ ಯತ್ನಾಳ್ ಹೇಳಿದ್ದರು. ಭದ್ರಾ ಮೇಲ್ದಂಡೆ ಯೋಜನೆ ಹಗರಣದ ಬಗ್ಗೆ ಹೆಚ್.ವಿಶ್ವನಾಥ್ ಹೇಳಿದ್ದರು. ಬಿಟ್ ಕಾಯಿನ್ ಪ್ರಕರಣದಲ್ಲಿ ಸಾವಿರಾರು ಕೋಟಿ ರೂ. ಹಗರಣ ನಡೆದಿದೆ. ಆಗ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪ, ಪುತ್ರ ಬಿ.ವೈ.ವಿಜಯೇಂದ್ರ, ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಗೆ ನೂರಾರು ಕೋಟಿ ರೂ. ಆದಾಯ ಇದರ ಬಗ್ಗೆ ತನಿಖೆ ಯಾಕಿಲ್ಲ ಎಂದು ತಿರುಗೇಟು ಕೊಟ್ಟರು.
ಭ್ರಷ್ಟಾಚಾರ ಪಿತಾಮಹರೇ ಬಿಜೆಪಿಯವರು. ನಮ್ಮ ಹಗರಣಗಳು ಬಿಚ್ಚಬಾರದು ಎಂದು ಇಲ್ಲಿ ಗಲಾಟೆ ಮಾಡ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲೇ ಇಷ್ಟು ಕೆಟ್ಟದಾಗಿ ಪ್ರತಿಪಕ್ಷಗಳು ನಡೆದುಕೊಂಡಿಲ್ಲ. ಕೇಂದ್ರ ಹಾಗೂ ಆರ್ಎಸ್ಎಸ್ ಸೂಚನೆಯಿಂದ ಈ ರೀತಿ ಮಾಡ್ತಿದ್ದಾರೆ. ಕೇವಲ ಪ್ರಚಾರಕ್ಕಾಗಿ ಈ ರೀತಿ ಗಲಾಟೆ ಮಾಡ್ತಿದ್ದಾರೆ. ಇವರು ಉತ್ತರ ಕೇಳಬಾರದು ಎಂದು ದುರದ್ದೇಶದಿಂದ ಬಂದಿದ್ದಾರೆ ಎಂದು ಸಿಎಂ ಕಿಡಿಕಾರಿದರು. ಈ ವೇಳೆ, ಭೂತದ ಬಾಯಲ್ಲಿ ಭಗವದ್ಗೀತೆ ಎಂದು ಪ್ರತಿಪಕ್ಷ ಸದಸ್ಯರು ಕೂಗಿದರು. ಇದರ ನಡುವೆ ಸಿಎಂ, ಪ್ರಜಾಪ್ರಭುತ್ವದ ಕಗ್ಗೊಲೆ, ರಾಜ್ಯದ ಜನರ ಬಗ್ಗೆ ಚರ್ಚೆ ಮಾಡುವ ಆಸಕ್ತಿ ಇಲ್ಲ. ಬಿಜೆಪಿಯವರಿಗೆ ರಾಜ್ಯದ ಹಿತ ಕಾಯಲು ಆಸಕ್ತಿ ಇಲ್ಲ. ರಾಜಕೀಯ ಮಾಡಬೇಕು ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಕೆಳಗೆ ಬರೋದರಿಂದ ಸಿಬಿಐ ಕೇಳ್ತಿದ್ದಾರೆ. ಯಾವ ಹಗರಣದ ಬಗ್ಗೆಯೂ ಇಡಿ ಬಂದಿರಲಿಲ್ಲ. ಈಗ ಸ್ವಯಂ ದೂರಿನ ಮೂಲಕ ಇಡಿ ತನಿಖೆ ಮಾಡ್ತಿದ್ದಾರೆ. ಸಂವಿಧಾನ ವಿರೋಧ ಮಾಡಿದಂತವರು. ಇವರು ನನಗೆ ಪಾಠ ಹೇಳಿಕೊಡುವುದಕ್ಕೆ ಬರುತ್ತೀರಾ? ಎಂದು ಕಿಡಿಕಾರಿದ ಸಿಎಂ, ಬಿಜೆಪಿಯವರು ಯಾವತ್ತಿಗೂ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ. ಇವರಿಗೆ ಯಾವತ್ತಾದರೂ ಎಸ್ಸಿ, ಎಸ್ಟಿ ವರ್ಗದವರ ಮೇಲೆ ಕಾಳಜಿ ಇದೆಯಾ? ಎಂದು ಪ್ರಶ್ನಿಸಿದರು. ನನ್ನ ಮಾತಿಗೆ ಇವರು ಅಡ್ಡಿಪಡಿಸುತ್ತಿದ್ದಾರೆ. ಬಿಜೆಪಿಯವರ ಹುನ್ನಾರ ಇಷ್ಟೇ ಸಿಎಂ ಹೆಸರಿಗೆ ಮಸಿ ಬಳಿಯುವುದು. ಇಡಿ ಬಿಜೆಪಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ವಿರುದ್ಧವಾಗಿದೆ. ಇದೇ ಬಿಜೆಪಿ ಆಡಳಿತದಲ್ಲಿ ಏನೇನೆಲ್ಲ ನುಂಗಿದ್ದಾರೆ. ಈಗ ಭ್ರಷ್ಟಾಚಾರ ಬಗ್ಗೆ ಮಾತಾಡ್ತಿದ್ದಾರೆ. ಇದಕ್ಕಿಂತ ದುರಂತ ಇಲ್ಲ ಎಂದು ಹೇಳಿದರು.
ಓದಿ: LIVE: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ: ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ - Siddaramaiah Press Meet