ಬೆಂಗಳೂರು: ಬಾಬುಸಾಪಾಳ್ಯದಲ್ಲಿ ಕುಸಿದು ಬಿದ್ದ ನಿರ್ಮಾಣದ ಹಂತದ ಕಟ್ಟಡದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಬಿಹಾರ ಮೂಲದ ಅರ್ಮಾನ್, ಮೊಹಮ್ಮದ್ ಸಾಹಿಲ್, ಸೋಲೋ ಪಾಸ್ವಾನ್, ಶ್ರೀರಾನ್ ಕಿರುಪಾಲ್. ತಮಿಳುನಾಡು ಮೂಲದ ಮಣಿಕಂಠನ್, ಸತ್ಯರಾಜು ಮತ್ತು ಆಂಧ್ರಪ್ರದೇಶ ಮೂಲದ ತುಳುಸಿರೆಡ್ಡಿ ಮತ್ತು ಉತ್ತರ ಪ್ರದೇಶ ಮೂಲದ ಪುಲ್ಚನ್ ಯಾದವ್ ಮೃತರು.
ಅಗ್ನಿಶಾಮಕದಳ ಜೊತೆಗೆ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿ ಜೊತೆಗೂಡಿ ಕಟ್ಟಡದ ಅವಶೇಷದಡಿ ಸಿಲುಕಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. 3 ಮಂದಿಯನ್ನ ರಕ್ಷಿಸಲಾಗಿದೆ. ಇನ್ನೂ ಮೂರರಿಂದ ನಾಲ್ಕು ಮಂದಿ ಅವಶೇಷಗಳಡಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಟ್ಟಡ ಕುಸಿತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೆಣ್ಣೂರು ಪೊಲೀಸರು ಮನೆ ಮಾಲೀಕನ ಪುತ್ರ ಭುವನ್ ಗೌಡ, ಕಟ್ಟಡದ ಮೇಲ್ವಿಚಾರಕರಾಗಿದ್ದ ಮೋಹನ್ ರೆಡ್ಡಿ, ಏಳುಮಲೈ ಎಂಬುವರನ್ನ ಬಂಧಿಸಿದ್ದಾರೆ. ಕಟ್ಟಡದ ನಾಲ್ಕನೇ ಅಂತಸ್ತಿನವರೆಗೂ ಉಸ್ತುವಾರಿ ವಹಿಸಿಕೊಂಡಿದ್ದ ಮುನಿಯಪ್ಪ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುರಂತ ಸಂಬಂಧ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಸ್ಥಳಕ್ಕೆ ಭೇಟಿ ನಿರ್ಲಕ್ಷ್ಯವಹಿಸಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದುರ್ಘಟನೆಯಲ್ಲಿ 8 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಯಾರು?. ಆಗಿದ್ದೇಗೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದರು.
ಅವಘಡದ ಬಗ್ಗೆ ಸುಮೊಟೋ ಕೇಸ್ ದಾಖಲಿಸಿಕೊಳ್ಳಲಾಗಿದೆ. ಅನುಮತಿ ಪಡೆದುಕೊಳ್ಳದೆ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗುತಿತ್ತು. 2 ವರ್ಷಗಳಿಂದ ಕಟ್ಟಡ ಕಟ್ಟುತ್ತಿದ್ದರೂ ಬಿಬಿಎಂಪಿ ಅಧಿಕಾರಿಗಳು ಪ್ರಶ್ನಿಸಿರಲಿಲ್ಲ. ನಾಲ್ಕು ಅಂತಸ್ತಿನ ಮಹಡಿ ನಿರ್ಮಿಸುವರೆಗೂ ನೋಟಿಸ್ ಕೊಟ್ಟಿಲ್ಲ. ಪರಿಶೀಲನೆ ವೇಳೆ ಅಧಿಕಾರಿಗಳ ಲೋಪ ಕಂಡುಬಂದಿದೆ. ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.
ಅಕ್ರಮವಾಗಿ ಕಟ್ಟಡಗಳನ್ನ ಕಟ್ಟಬಾರದು. ಅಧಿಕಾರಿಗಳು ಎಚ್ವರಿಕೆ ವಹಿಸಬೇಕು. ಕೂಡಲೇ ಎಲ್ಲಾ ಕಡೆ ಕ್ರಮ ತೆಗೆದುಕೊಳ್ಳಬೇಕು. ಇಂತಹ ಅಕ್ರಮಗಳ ಬಗ್ಗೆ ಪೊಲೀಸರಿಗೆ ದೂರು ಕೊಡಬೇಕಿತ್ತು. ಯಾವುದನ್ನೂ ಮಾಡದೆ, ಅಕ್ರಮ ಮಾಡುವವರ ಜೊತೆ ಅಧಿಕಾರಿಗಳು ಕೈಜೋಡಿಸಿದ್ದಾರೆ. ಘಟನೆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ನಮ್ಮಲ್ಲಿ ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿದಂತೆ 500 ದೂರುಗಳಿವೆ. ಸಾರ್ವಜನಿಕರು ಜಬಾಬ್ದಾರಿ ವಹಿಸಬೇಕು. ಇದೊಂದು ಕೇಸ್ ಅಕ್ರಮ ನಿರ್ಮಾಣ ಕಟ್ಟಡಗಳ ವಿರುದ್ಧ ಕ್ರಮಕ್ಕೆ ಮಾದರಿ ಆಗಲಿದೆ ಎಂದು ಎಚ್ಚರಿಕೆ ರವಾನಿಸಿದರು.
ಬಿಬಿಎಂಪಿ ಅಧಿಕಾರಿಗಳಿಗೆ ತರಾಟೆ: ಬಿ ಖಾತಾದಲ್ಲಿ ಕಟ್ಟಡ ಕಟ್ಟುತ್ತಿದ್ದರು ಬಿಬಿಎಂಪಿ ಅಧಿಕಾರಿಗಳು ಯಾಕೆ ಕ್ರಮಕ್ಕೆ ಮುಂದಾಗಿಲ್ಲ. ಇನ್ನೂ ನಗರದಲ್ಲಿ ಈ ರೀತಿ ಎಷ್ಟು ಕಟ್ಟಡಗಳು ನಿರ್ಮಾಣವಾಗುತ್ತಿವೆ. ನೀವು ಏನು ಕೆಲಸ ಮಾಡುತ್ತಿದ್ದೀರಿ ಎಂದು ಪಾಲಿಕೆ ಅಧಿಕಾರಿಗಳಿಗೆ ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡ ಕುಸಿತ ಪ್ರಕರಣ: ಮಾಲೀಕನ ಪುತ್ರನ ಬಂಧನ