ಬೆಳಗಾವಿ: ಖಾನಾಪುರ ಕಾಡಂಚಿನ ಅಮಗಾಂವ ಗ್ರಾಮದಲ್ಲಿ ಕಟ್ಟಿಗೆ ಸ್ಟ್ರೇಚರ್ನಲ್ಲಿ ಐದು ಕಿ.ಮೀ. ಹೊತ್ತೊಯ್ದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಹೌದು, ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಹರ್ಷದಾ ಘಾಡಿ (42) ಮೃತಪಟ್ಟಿದ್ದಾರೆ. ತೀವ್ರ ಜ್ವರದ ಹಿನ್ನೆಲೆಯಲ್ಲಿ ಜುಲೈ 18ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದರು. ಕಟ್ಟಿಗೆಯಲ್ಲಿ ಸ್ಟ್ರೇಚರ್ ಮಾಡಿ ಐದು ಕಿಮೀ ಚಿಕಲೆವರೆಗೂ ಸುರಿಯುತ್ತಿದ್ದ ಭಾರಿ ಮಳೆಯಲ್ಲಿ ಹೊತ್ತುಕೊಂಡು ಬಂದಿದ್ದರು. ಮಹಿಳೆಯ ಪ್ರಾಣ ಉಳಿಸಲು ಕಸರತ್ತು ನಡೆಸಿದ್ದರು. ಆದರೆ, ಗ್ರಾಮಸ್ಥರ ಹೋರಾಟ ಕೊನೆಗೂ ಫಲಿಸಲಿಲ್ಲ. ಚಿಕಿತ್ಸೆಗೆ ಸ್ಪಂದಿಸದೇ ಹರ್ಷದಾ ಇಂದು ಸಾವನ್ನಪ್ಪಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಮೃತ ಹರ್ಷದಾ ಪತಿ ಹರಿಶ್ಚಂದ್ರ ಘಾಡಿ, "18ರಂದು ಮಧ್ಯಾಹ್ನ 1 ಗಂಟೆಗೆ ನನ್ನ ಪತ್ನಿಯ ಬಿಪಿ ಲೋ ಆಗಿ ಕುಸಿದು ಬಿದ್ದರು. ಆಗ ಗ್ರಾಮಸ್ಥರು ಕೂಡಿಕೊಂಡು ಕಷ್ಟಪಟ್ಟು ಸ್ಟ್ರೇಚರ್ನಲ್ಲಿ ಚಿಕಲೆ ಗ್ರಾಮದವರೆಗೂ ಹೊತ್ತುಕೊಂಡು ಬಂದೆವು. ಆ ಬಳಿಕ ಆಂಬ್ಯುಲೆನ್ಸ್ನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದೆವು. ಅಲ್ಲಿ ಆಗದೇ, ಕೊನೆಗೆ ಕೆಎಲ್ಇ ಆಸ್ಪತ್ರೆಗೆ ಸೇರಿಸಿದೆವು. ಆದರೆ, ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಅವರು ಮೃತರಾಗಿದ್ದಾರೆ. ನಮ್ಮೂರಲ್ಲಿ ಬಹಳಷ್ಟು ಸಮಸ್ಯೆ ಇದೆ. ವಿದ್ಯುತ್, ರಸ್ತೆ, ಮೊಬೈಲ್ ನೆಟ್ವರ್ಕ್ ಕೂಡ ಇಲ್ಲ. ನಿತ್ಯ ಸಮಸ್ಯೆಯಲ್ಲೇ ಬದುಕುವ ಸ್ಥಿತಿ ಇದೆ" ಎಂದು ಅಳಲು ತೋಡಿಕೊಂಡರು.
ಮುಖ್ಯರಸ್ತೆಯಿಂದ 12 ಕಿಮೀ ಒಳಗೆ ದಟ್ಟ ಅರಣ್ಯ ಪ್ರದೇಶದಲ್ಲಿ ಅಮಗಾಂವ ಗ್ರಾಮವಿದೆ. ಇಲ್ಲಿ 73 ಕುಟುಂಬಗಳು ಇದ್ದು, 560 ಜನಸಂಖ್ಯೆ ಇದೆ. ರೇಶನ್ ಬೇಕಾದರೆ ಕಾಡಿನಲ್ಲಿ ನಡೆದುಕೊಂಡು ಚಿಕಲೆ ಇಲ್ಲವೇ ಜಾಂಬೋಟಿಗೆ ಬರಬೇಕು. ಹೀಗೆ ಬಿಡದೇ ಮಳೆ ಸುರಿದರೆ ಮನೆ ಬಿಟ್ಟು ಹೊರಗೆ ಬಾರದ ಪರಿಸ್ಥಿತಿ. ಇನ್ನು ತುರ್ತು ಆರೋಗ್ಯ ಸಮಸ್ಯೆ ಉದ್ಭವಿಸಿದಾಗ ಆಸ್ಪತ್ರೆಗೆ ಸೇರಿಸಲು ಹರಸಾಹಸ ಪಡಬೇಕು.
ಅಮಗಾಂವ ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕ ನಿಂಗಪ್ಪ ಬಾಳೇಕುಂದ್ರಿ ಮಾತನಾಡಿ, "ಐದಾರು ದಿನ ಚಿಕಿತ್ಸೆ ನೀಡಿದರೂ ಪಾಪ ಮಹಿಳೆ ಬದುಕಲಿಲ್ಲ. ಮೃತ ಮಹಿಳೆಗೆ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಇದೇ ರೀತಿ ಈ ಊರಲ್ಲಿ ಸಾಕಷ್ಟು ಜನರು ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದಾರೆ. ಅಮಗಾಂವ ಗ್ರಾಮವು ಮೀಸಲು ಅರಣ್ಯ ಪ್ರದೇಶದಲ್ಲಿದೆ. ಸಂಚಾರಕ್ಕೆ ಸರಿಯಾದ ರಸ್ತೆ, ಸೇತುವೆ ಇಲ್ಲ. 28 ವರ್ಷಗಳಿಂದ ಅಮಗಾಂವ ಸರ್ಕಾರಿ ಶಾಲೆಯ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿನ ಪರಿಸ್ಥಿತಿ ನೋಡಿ, ಮನೆ ಮಾಡಿಕೊಂಡು ನಾನು ಅಲ್ಲಿಯೇ ವಾಸವಿದ್ದೇನೆ" ಎಂದು ವಿವರಿಸಿದರು.
"ದಯಮಾಡಿ ಅಮಗಾಂವ ಊರನ್ನು ಬೇರೆ ಕಡೆ ಸ್ಥಳಾಂತರಿಸಿ ಅನುಕೂಲ ಮಾಡಿಕೊಡಿ. ಇಲ್ಲವಾದರೆ, ಸೇತುವೆ ಮತ್ತು ರಸ್ತೆ ಸೇರಿ ಇನ್ನಿತರ ಮೂಲಸೌಕರ್ಯಗಳನ್ನಾದ್ರೂ ಕಲ್ಪಿಸಿ, ಮುಂದೆ ಈ ರೀತಿ ಘಟನೆಗಳು ಮರುಕಳಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು" ಎಂದು ಮನವಿ ಮಾಡಿದರು.