ಬೆಂಗಳೂರು: ಬಾಕಿ ಇರುವ 34 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು. ವಿಧಾನಸಭೆಯಲ್ಲಿ ಇಂದು ಬಿಬಿಎಂಪಿಯ ಪೌರ ಕಾರ್ಮಿಕರು ಮತ್ತು ಆರೋಗ್ಯ ಗ್ಯಾಂಗ್ಮಾನ್ಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದರು. ಈ ಕುರಿತು ಪ್ರಕಟಣೆ ನೀಡಿದ ಸ್ಪೀಕರ್ ಯು.ಟಿ.ಖಾದರ್, ಕಲಾಪ ವೀಕ್ಷಣೆಗೆ ಆಗಮಿಸಿದ ಪೌರ ಕಾರ್ಮಿಕರನ್ನು ಸ್ವಾಗತಿಸಿದರು.
ಈ ವೇಳೆ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ಸಭಾಧ್ಯಕ್ಷರ ಕ್ರಮವನ್ನು ಸ್ವಾಗತಿಸಿದರು. ವಿಧಾನಸೌಧದ ವಿನ್ಯಾಸ ಪ್ರಜಾಪ್ರಭುತ್ವದ ಆಶಯಕ್ಕೆ ಅನುಗುಣವಾಗಿದೆ. ಪ್ರತಿನಿಧಿಗಳಾದ ನಾವು ಕೆಳಗೆ ಕುಳಿತು ಚರ್ಚೆ ಮಾಡುತ್ತೇವೆ. ಪ್ರಜೆಗಳು ನಮ್ಮ ಮೇಲಿನ ಅಂತಸ್ತಿನಲ್ಲಿ ಕುಳಿತು ನಮ್ಮನ್ನು ವೀಕ್ಷಿಸುತ್ತಿದ್ದಾರೆ.
ಶ್ರೇಣೀಕೃತ ಸಮಾಜದಲ್ಲಿ ಈಗಲೂ ಆಸ್ತಿ, ಅಂತಸ್ತು, ಹಣ ಮತ್ತು ವೃತ್ತಿಯನ್ನು ನೋಡಿ ಗೌರವಿಸುವ ಮನೋಭಾವವಿದೆ. ವ್ಯಕ್ತಿಗೆ ಗೌರವ ನೀಡಬೇಕೇ ಹೊರತು ವೃತ್ತಿಗಲ್ಲ. ಪೌರ ಕಾರ್ಮಿಕರೂ ಕೂಡ ನಮ್ಮ ಮೇಲಿನ ಅಂತಸ್ತಿನಲ್ಲಿ ಕುಳಿತು ಶಾಸಕರು ಸರಿಯಾಗಿ ಕೆಲಸ ಮಾಡುತ್ತಿದ್ದಾರೆಯೇ, ಇಲ್ಲವೇ ಎಂದು ನೋಡುವುದು ಪ್ರಜಾಪ್ರಭುತ್ವದ ಸೌಂದರ್ಯ. ಇದು ಸಮ ಸಮಾಜದ ಸಂದೇಶ ರವಾನಿಸುತ್ತದೆ ಎಂದು ಹೇಳಿದರು.
ಸ್ಪೀಕರ್ ಕ್ರಮವನ್ನು ಸ್ವಾಗತಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿವಿಧ ವರ್ಗಗಳಿಗೆ ಕಲಾಪ ವೀಕ್ಷಿಸಲು ಅವಕಾಶ ನೀಡಿರುವುದು ಶ್ಲಾಘನೀಯ. ಈ ಮೂಲಕ ಪೌರ ಕಾರ್ಮಿಕರ ಬಹಳ ದಿನಗಳ ಚರ್ಚೆಗೂ ನಾಂದಿ ಹಾಡಿದೆ. ತಾವು ಮುಖ್ಯಮಂತ್ರಿಯಾಗಿದ್ದಾಗ 11 ಸಾವಿರ ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ನೇಮಕಾತಿ ಆದೇಶ ನೀಡಲಾಗಿತ್ತು. ಬಾಕಿ ಇರುವ 34 ಸಾವಿರ ಪೌರ ಕಾರ್ಮಿಕರಿಗೆ ಖಾಯಂಗೊಳಿಸುವ ಆದೇಶ ನೀಡಬೇಕಿದೆ ಎಂದರು.
ನಾವು ಪೌರ ಕಾರ್ಮಿಕರಿಗೆ ಯಾವ ರೀತಿ ಸ್ಪಂದಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಖಾಯಂ ಉದ್ಯೋಗ ಭದ್ರತೆಯ ಪ್ರಕ್ರಿಯೆ ಪೂರ್ಣಗೊಳಿಸಬೇಕು. ವೃತ್ತಿಗೆ ಗೌರವ ನೀಡಬೇಕು, ವ್ಯಕ್ತಿಗಲ್ಲ. ಬಹುಷಃ ಸಚಿವರು ಬಾಯ್ತಪ್ಪಿನಿಂದ ಮಾತನಾಡಿರಬಹುದು. ಇಂದು ಗುಮಾಸ್ತನಾಗಿದ್ದವನು ನಾಳೆ ಐಎಎಸ್ ಅಧಿಕಾರಿಯಾಗಿರುವ ಉದಾಹರಣೆಯಿದೆ. ಪೌರಕಾರ್ಮಿಕರನ್ನು ಘನತೆಯಿಂದ ನೋಡಬೇಕು ಅಲ್ಲದೆ ಪೌರ ಕಾರ್ಮಿಕರನ್ನು ಪೌರ ನೌಕರರೆಂದು ಕರೆಯುವ ಅಗತ್ಯವಿದೆ ಎಂದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಈ ಹಿಂದೆ ತಾವು ಬಿಬಿಎಂಪಿಯ ಸಚಿವರಾಗಿದ್ದಾಗ ಪೌರ ಕಾರ್ಮಿಕರಿಗೆ 5 ಸಾವಿರ ರೂ. ಮಾತ್ರ ವೇತನ ಸಿಗುತ್ತಿತ್ತು. ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದರು. 35 ಸಾವಿರ ಸಿಬ್ಬಂದಿಯ ಲೆಕ್ಕ ಕೊಡುತ್ತಿದ್ದರು. ಬಯೋಮೆಟ್ರಿಕ್ ಹಾಜರಾತಿ ಜಾರಿಗೊಳಿಸಿದಾಗ 18 ಸಾವಿರ ಮಾತ್ರ ಸಿಬ್ಬಂದಿಗಳಿರುವುದು ಪತ್ತೆಯಾಯಿತು. ಅವರಿಗೆ ಕನಿಷ್ಠ ವೇತನವನ್ನು ಬಿಬಿಎಂಪಿಯಿಂದಲೇ ನೇರವಾಗಿ ಪಾವತಿಸುವ ವ್ಯವಸ್ಥೆ ಮಾಡಿದ್ದೆವು. ನೌಕರರನ್ನು ಖಾಯಂಗೊಳಿಸುವ ಪ್ರಕ್ರಿಯೆಯನ್ನು ನಮ್ಮ ಸರ್ಕಾರ ಪೂರ್ಣಗೊಳಿಸಲಿದೆ ಎಂದು ತಿಳಿಸಿದರು.
'ಪೌರ ಕಾರ್ಮಿಕರಿಗೆ ಪರಿಷತ್‌ನಲ್ಲಿ ಸ್ಥಾನ ನೀಡಬೇಕು': ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಶಿಕ್ಷಕರಿಗೆ ವಿಧಾನ ಪರಿಷತ್‌ನಲ್ಲಿ ಸ್ಥಾನಗಳು ಮೀಸಲಾದಂತೆ ಪೌರ ಕಾರ್ಮಿಕ ವರ್ಗಕ್ಕೂ ಸದಸ್ಯ ಸ್ಥಾನವನ್ನು ನೀಡಬೇಕು ಎಂದು ಸಲಹೆ ನೀಡಿದರು.
'ನಾನು ಪೌರ ಕಾರ್ಮಿಕರ ಮಗ': ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸಂತಪ್ಪ ಮಾತನಾಡಿ, ತಾವು ಹನುಮಕ್ಕ ಎಂಬ ಪೌರ ಕಾರ್ಮಿಕರ ಮಗನಾಗಿದ್ದು, ದಾವಣಗೆರೆಯಲ್ಲಿ ಅಬ್ದುಲ್ ಜಬ್ಬರ್ ಅವರ ಮನೆ ಮುಂದೆ ತಾಯಿಯೊಂದಿಗೆ ಕಸ ಗುಡಿಸುತ್ತಿದ್ದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಭಾಗವಾಗಿ ಇಂದು ಈ ಸದನಕ್ಕೆ ಬಂದಿದ್ದೇನೆ. ಗುತ್ತಿಗೆದಾರರು ಪೌರ ಕಾರ್ಮಿಕರನ್ನು ಹಗಲು ದರೋಡೆ ಮಾಡುತ್ತಿದ್ದಾರೆ. ಭಯೋತ್ಪಾದಕರ ರೀತಿ ರಕ್ತ ಹೀರುತ್ತಿದ್ದಾರೆ. ಇದನ್ನು ಸರಿಪಡಿಸಬೇಕು. ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಇದನ್ನೂ ಓದಿ: ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ: ಸಚಿವ ಕೆ.ಹೆಚ್.ಮುನಿಯಪ್ಪ