ಬೆಳಗಾವಿ: "ನಿಮಗೆ ತಾಕತ್ತಿದ್ದರೆ 2ಎ ಮೀಸಲಾತಿಗೆ ಆಗ್ರಹಿಸಿ ನಾವು ನಡೆಸಿದ ಹೋರಾಟದಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ. ಸಚಿವ ಸ್ಥಾನದಿಂದ ರಾಜೀನಾಮೆ ಕೇಳಿ" ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸವಾಲು ಹಾಕಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ರಾಜು ಕಾಗೆ, ಚನ್ನರಾಜ ಹಟ್ಟಿಹೊಳಿ ಅವರು ಹೋರಾಟದಲ್ಲಿ ಭಾಗವಹಿಸಿದ್ದರು. ನಮ್ಮ ಹೋರಾಟ ಸಂವಿಧಾನ ವಿರೋಧ ಎಂದು ಹೇಳುವ ನೀವು ಇವರ ವಿರುದ್ಧ ಕ್ರಮಕೈಗೊಳ್ಳಿ ನೋಡೋಣ" ಎಂದು ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದರು.
"ನಮ್ಮ ಹೋರಾಟ ಸಂವಿಧಾನ ವಿರೋಧಿ ಆಗಿದ್ದರೆ, ಪ್ರತಿಭಟನೆಗೆ ಯಾಕೆ ಅನುಮತಿ ನೀಡಿದಿರಿ?. ನೀವು ಬಸವಣ್ಣನವರನ್ನು 'ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿದ್ದೀರಿ. ಆದರೆ, ನಮ್ಮ ಸಮಾಜವನ್ನು ನಿಂದಿಸುವ ಮೂಲಕ ಬಸವಣ್ಣನವರಿಗೆ ಅವಮಾನಿಸಿದ್ದೀರಿ. ಲಿಂಗಾಯತರ ಸ್ವಾಭಿಮಾನ ಕೆಣಕಲು ಪ್ರಯತ್ನಿಸಿದ್ದೀರಿ. ನಾಲ್ಕು ವರ್ಷಗಳಿಂದ ನಾವು ಶಾಂತಿಯುತವಾಗಿ ಹೋರಾಡಿದ್ದೆವು. ಆದರೆ, ಚನ್ನಮ್ಮನ ನಾಡಿನಲ್ಲಿ ಈಗ ಕ್ರಾಂತಿ ಮಾಡಲು ಸರ್ಕಾರವೇ ಬಡಿದೆಬ್ಬಿಸಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ನಮ್ಮ ಸಮಾಜದ ಬಗ್ಗೆ ನಿಮಗೆ ಕಳಕಳಿ ಇರದಿದ್ದರೆ, ಮೀಸಲಾತಿ ಕೊಡಲಾಗದು ಎಂದು ಹೇಳಿ ನಡೆಯುತ್ತದೆ. ಆದರೆ, ನಮ್ಮ ಹೋರಾಟವೇ ಸಂವಿಧಾನ ವಿರೋಧಿ ಎಂದು ನೀವು ಹೇಳಿರುವುದೇ ಸಂವಿಧಾನ ವಿರೋಧಿ. ಆ ಹೇಳಿಕೆಯನ್ನು ಸದನದ ಕಡತದಿಂದ ತೆಗೆದು ಹಾಕಬೇಕು. ಅದೇ ರೀತಿ ಸಮಾಜದ ಕ್ಷಮೆ ಕೇಳಬೇಕು" ಎಂದು ಒತ್ತಾಯಿಸಿದರು.
"ಪಂಚಮಸಾಲಿ ಹೋರಾಟಗಾರರ ಮೇಲಿನ ಮಾರಣಾಂತಿಕ ಹಲ್ಲೆ ಮತ್ತು ಮುಖ್ಯಮಂತ್ರಿ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಡಿ.16ರಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ಮಾಡುತ್ತೇನೆ. ಪ್ರತಿದಿನವೂ ಒಂದೊಂದು ಜಿಲ್ಲೆಯ ಸಮಾಜದ ಮುಖಂಡರು ನನ್ನ ಜೊತೆಗೆ ಪಾಲ್ಗೊಳ್ಳಲಿದ್ದಾರೆ" ಎಂದು ತಿಳಿಸಿದರು.
ಕೊರಟಗೆರೆಯಲ್ಲಿ ಲಿಂಗಾಯತರು ಪ್ರತಿಭಟನೆ ನಡೆಸಬೇಕು: ಲಾಠಿ ಚಾರ್ಜ್ ಸಮರ್ಥಿಸಿಕೊಂಡ ಗೃಹ ಸಚಿವ ಡಾ. ಜಿ.ಪರಮೇಶ್ವರ ವಿರುದ್ಧ ಕಿಡಿಕಾರಿದ ಸ್ವಾಮೀಜಿ, "ನೀವು ಓದಿದ್ದು, ಬೆಳೆದಿದ್ದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ. ಆದರೆ, ನಮ್ಮ ಮೇಲಿನ ಹಲ್ಲೆ ಸಮರ್ಥನೆ ಮಾಡಿಕೊಂಡಿದ್ದು ಎಷ್ಟು ಸರಿ?. ಇದು ಸಿದ್ಧಗಂಗಾ ಮಠಕ್ಕೆ ನೀವು ಮಾಡಿದ ಅಪಮಾನ. ನಿಮಗೆ ತುತ್ತು ಕೊಟ್ಟ ಸಮಾಜವನ್ನು ನೀವು ಅವಮಾನಿಸಿದ್ದೀರಿ. ಲಿಂಗಾಯತರ ಮೇಲಿನ ಹಲ್ಲೆ ಘಟನೆ ಖಂಡಿಸಿ, ಅವರ ಕೊರಟಗೆರೆ ಕ್ಷೇತ್ರದಲ್ಲಿ ಲಿಂಗಾಯತರು ಪ್ರತಿಭಟನೆ ನಡೆಸಬೇಕು" ಎಂದು ಕರೆ ನೀಡಿದರು.
ನಮ್ಮ ಅನ್ನದ ತಟ್ಟೆಗೆ ಕೈಹಾಕಿದರೆ, ಅವರ ಕೈ ಕತ್ತರಿಸುತ್ತೇವೆ ಎಂಬ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಹೇಳಿಕೆ ಬಗ್ಗೆ ಮಾತನಾಡಿ, "ಹಾಗೇ ಮಾತನಾಡುವುದೇ ಅವರ ಗುಣ. ಆದರೆ, ನಾವು ಅಹಿಂಸಾತ್ಮಕವಾಗಿ ಹೇಳಿಕೆ ಕೊಡುತ್ತೇವೆ. ಬಸವಣ್ಣನವರ ತತ್ವದಡಿ ನಾವು ಹೋರಾಡುತ್ತೇವೆ. ಅಸಾಂವಿಧಾನಿಕ ಪದ ಬಳಸದೆ, ಸಂಸ್ಕಾರಯುತವಾದ ಭಾಷೆ ಬಳಸುತ್ತೇವೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಲಾಢ್ಯ ಸಮುದಾಯದವರು ಮೀಸಲಾತಿ ಕೇಳುತ್ತಿರುವುದು ಸಂವಿಧಾನಕ್ಕೆ ಬಗೆಯುತ್ತಿರುವ ಅಪಚಾರ: ಲೇಖಕ ಕುಂ. ವೀರಭದ್ರಪ್ಪ