ಬೆಳಗಾವಿ: ಲಿಂಗಾಯತರ ವಿರುದ್ಧ ಸಿಎಂ ಸಿದ್ದರಾಮಯ್ಯ ಹೃದಯಹೀನರಾಗಿ ನಡೆದುಕೊಂಡಿದ್ದಾರೆ. ನೀವು ಅಧಿಕಾರಕ್ಕೆ ಬರಲು ನಾವು ಆಶೀರ್ವಾದ ಮಾಡಿದ್ದೆವು. ಅದಕ್ಕೆ ಪ್ರತಿಯಾಗಿ ನಮ್ಮನ್ನೇ ಹೊಡೆದಿದ್ದೀರಿ. ಮುಂದಿನ ಚುನಾವಣೆಯಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಇಂದು ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿಚಾರ್ಜ್ ಖಂಡಿಸಿ ಹಿರೇಬಾಗೇವಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ ತಡೆದು ಮತ್ತೆ ಧರಣಿ ನಡೆಸಿದರು. ಈ ವೇಳೆ ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ಹೊರಹಾಕಿದರು.
ಲಾಠಿಚಾರ್ಜ್ ನಡೆಸಿದಾಗ ನಮ್ಮ ಸಮಾಜದ ಒಬ್ಬ ಶಾಸಕರು ಮುಖ್ಯಮಂತ್ರಿ ಬಳಿ ಹೋಗಿ ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಲಾಠಿಚಾರ್ಜ್ ನಿಲ್ಲಿಸಿ ಎಂದು ಕೇಳಿದ್ದಾರೆ. ಆದರೆ, ಇದಕ್ಕೆ ಸಿದ್ದರಾಮಯ್ಯನವರು, ಏಯ್ ಹೊಡೀಲಿ ಬಿಡ್ರೀ, ಅವರು ನಮ್ಮನ್ನೇ ಹೆದರಿಸುತ್ತಾರೆಯೇ? ನಮ್ಮ ಬಳಿಯೂ ಲಾಠಿ ಇದೆ ಎಂದು ಹೇಳಿದ್ದರು. ಈ ವಿಷಯವನ್ನು ಶಾಸಕರೇ ಬಂದು ನನಗೆ ಹೇಳಿದ್ದಾರೆ. ಸುವರ್ಣ ವಿಧಾನಸೌಧದ ಸಿಸಿಟಿವಿ ಕ್ಯಾಮೆರಾಗಳನ್ನು ತಪಾಸಣೆ ಮಾಡಿ ಖಾತ್ರಿ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದಾಗ ನಾವೆಲ್ಲಾ ನಿಮ್ಮ ತಲೆ ಮೇಲೆ ಹೂವು ಹಾಕಿ ಆಶೀರ್ವಾದ ಮಾಡಿದ್ದೆವು. ಆದರೆ, ಲಿಂಗಾಯತರ ಬಗ್ಗೆ ನಿಜವಾಗಿಯೂ ನಿಮ್ಮ ಧೋರಣೆ ಏನು ಎಂಬುದನ್ನು ಈಗ ತೋರಿಸಿದ್ದೀರಿ. 2028ಕ್ಕೆ ನಮ್ಮ ಸಮಾಜಕ್ಕೆ ಗೌರವ ಕೊಡುವ ಮುಖ್ಯಮಂತ್ರಿಯನ್ನೇ ನಾವು ಆಯ್ಕೆ ಮಾಡುತ್ತೇವೆ ಎಂದು ಸವಾಲು ಹಾಕಿದರು.
ನಿಮ್ಮ ಸರ್ಕಾರ ಇರುವವರೆಗೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ನಂತರ ನಮ್ಮ ದಾರಿ ನಾವು ಕಂಡುಕೊಳ್ಳುತ್ತೇವೆ. ತಕ್ಷಣವೇ ಎಲ್ಲರ ಮೇಲಿನ ಪ್ರಕರಣ ಹಿಂಪಡೆಯಬೇಕು. ಬಹಿರಂಗವಾಗಿ ಸಮಾಜದ ಕ್ಷಮೆ ಕೇಳಬೇಕು. ಅಲ್ಲಿಯವರೆಗೂ ರಾಜ್ಯದಾದ್ಯಂತ ಹೋರಾಟ ನಿಲ್ಲುವುದಿಲ್ಲ ಎಂದರು.
ರಾಷ್ಟ್ರೀಯ ಹೆದ್ದಾರಿ ತಡೆದ ಹಿನ್ನೆಲೆಯಲ್ಲಿ ಪಂಚಮಸಾಲಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ.
ಇದನ್ನೂ ಓದಿ: ಕಾನೂನು ಕೈಗೆತ್ತಿಕೊಂಡಿದ್ದರಿಂದ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಅನಿವಾರ್ಯವಾಯ್ತು: ಜಿ. ಪರಮೇಶ್ವರ್