ಚಿಕ್ಕೋಡಿ (ಬೆಳಗಾವಿ): ಹಿಂದೂ ಎನ್ನುವ ಪದ ಅಶ್ಲೀಲ ಎಂದಿದ್ದವರು ಈಗ ಮಗಳು ಚುನಾವಣೆಗೆ ಸ್ವರ್ಧೆ ಮಾಡುತ್ತಿದ್ದಂತೆ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದಾರೆ. ಮೊದಲೆಲ್ಲ ಸ್ಮಶಾನಕ್ಕೆ ಹೋಗಿ ಹೊಸ ಕಾರ್ ಪೂಜೆ ಮಾಡ್ತಿದ್ರು. ಈಗೀಗ ದೇವಸ್ಥಾನಗಳ ಕಡೆ ಮುಖ ಮಾಡಿದ್ದಾರೆ ಎಂದು ಸತೀಶ್ ಜಾರಕಿಹೊಳಿ ವಿರುದ್ಧ ಶಾಸಕ ಬಸವನಗೌಡ ಯತ್ನಾಳ್ ವಾಗ್ದಾಳಿ ನಡೆಸಿದರು.
ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಸಾಬ್ ಜೊಲ್ಲೆ ಪರವಾಗಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಎಷ್ಟು ದಿನ ಅಂತ ಸಾವಕಾರ್‌ಗೆ ಕೈ ಮುಗಿತೀರಾ, ನಿಮ್ಮಲ್ಲಿ ಸ್ವಾಭಿಮಾನ ಇಲ್ಲವಾ?, ಇನ್ಮುಂದೆ ಸಾವುಕಾರ್‌ನ ಬೆಕ್ಕು, ನಾಯಿಗಳಿಗೆ ಸಲಾಂ ಹೊಡೆಯಬೇಕಾಗುತ್ತದೆ. ಬೆಳಗಾವಿಯ ಎಲ್ಲ ಸಮಾಜದವರು ಎಂಎಲ್‌ಎ, ಎಂಪಿಗಳು ಆಗಬೇಕು. ಆದರೆ, ಮೀಸಲು ಕ್ಷೇತ್ರದಲ್ಲೂ ಕೂಡ ಸತೀಶ್ ಜಾರಕಿಹೊಳಿ ಅವರೇ ಸ್ಪರ್ಧೆ ಮಾಡಿದ್ದಾರೆ, ಜನರಲ್ ಇರುವ ಕ್ಷೇತ್ರದಲ್ಲೂ ಅವರ ಮಗಳನ್ನು ಸ್ಪರ್ಧೆಗಿಳಿಸಿದ್ದಾರೆ ಎಂದು ಯತ್ನಾಳ್ ಕಿಡಿಕಾರಿದರು.
ಹಿಂದುತ್ವ, ಸನಾತನ ಧರ್ಮ ಉಳಿಸಲು ಬಿಜೆಪಿಗೆ ಮತ ನೀಡಬೇಕು. ಯಾರೂ ಸಹ ಹೆದರುವ ಅವಶ್ಯಕತೆ ಇಲ್ಲ. ನನ್ನನ್ನು ಚುನಾವಣೆಯಲ್ಲಿ ಸೋಲಿಸಲು ವಿಜಯಪುರಕ್ಕೆ 15 ಜನರನ್ನು ಜಾರಕಿಹೊಳಿ ಕಳಿಸಿದ್ದರು. ಜೊತೆಗೆ ನನ್ನನ್ನು ಸೋಲಿಸಲು ಅನೇಕ ಕಡೆಗಳಿಂದ ದುಡ್ಡು ಬಂತು. ಆದರೆ ನಾನು ನಿಮ್ಮ ಆಶೀರ್ವಾದದಿಂದ ಜಯಭೇರಿ ಬಾರಿಸಿದ್ದೇನೆ. ಅದೇ ರೀತಿಯಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಲು ಹಾಗೂ 2ನೇ ಬಾರಿಗೆ ಸಂಸದರಾಗಲು ಅಣ್ಣಸಾಬ್ ಜೊಲ್ಲೆ ಅವರಿಗೆ ಮತದಾನ ಮಾಡುವಂತೆ ಮನವಿ ಮಾಡಿದರು.
ಸಮಾವೇಶದಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾತನಾಡಿ, ನಾನು ಮತ್ತು ಬಸನಗೌಡರಂತಹ ನಾಯಕರು ರಾಜಕಾರಣಕ್ಕೆ ಬಂದದ್ದು, ಹಿಂದುತ್ವಕ್ಕಾಗಿ. ಆದರೆ ಲಕ್ಷ್ಮಣ ಸವದಿ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ. ಭಾರತ್ ಮಾತಾ ಕೀ ಜೈ ಅನ್ನೋದಕ್ಕೂ ಎಐಸಿಸಿ ಅಧ್ಯಕ್ಷರ ಅನುಮತಿ ತೆಗೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಜಾತಿ ರಾಜಕಾಣದಿಂದ ದೇಶ ಗೆಲ್ಲುವುದಿಲ್ಲ, ನೀತಿ ರಾಜಕಾರಣದಿಂದ ದೇಶ ಗೆಲ್ಲುತ್ತದೆ. ಕಾಂಗ್ರೆಸ್ ನೀತಿಗೆಟ್ಟ ರಾಜಕಾರಣ ಮಾಡುತ್ತಿದೆ. ಬಾಂಬ್ ಇಡುವವರನ್ನು ಕಾಂಗ್ರೆಸ್ 'ದೇ ಆರ್ ಮೈ ಬ್ರದರ್ಸ್' ಅಂತ ಹೇಳುತ್ತೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಸಚಿವ ದಿನೇಶ್ ಗಂಡೂರಾವ್ ಕುಟುಂಬದ ಬಗ್ಗೆ ಹೇಳಿಕೆ; ಯತ್ನಾಳ್ ವಿರುದ್ಧ ಮುಖ್ಯ ಚುನಾವಣಾಧಿಕಾರಿಗೆ ಕಾಂಗ್ರೆಸ್ ದೂರು - Congress
ಕೋವಿಡ್‌ನ ಸಂಕಷ್ಟ ಕಾಲದಲ್ಲಿ ಕೇಂದ್ರ ಸರ್ಕಾರ ಜನತೆಯ ಪರವಾಗಿ ನಿಂತಿತ್ತು. ಪ್ರಧಾನಿ ಮೋದಿಯವರು ದೇಶದ ಜನತೆಗೆ ಬಹಳ ಯೋಜನೆ ನೀಡಿದ್ದು, ಅವರು ನಮ್ಮ ನಾಯಕ ಎನ್ನುವುದೇ ನಮಗೆ ಹೆಮ್ಮ. ಕಾಂಗ್ರೆಸ್ ಗ್ಯಾರಂಟಿ ಕೊಡ್ತಿರೋದು ನಮ್ಮನ್ನು ಹರಕೆಯ ಕುರಿ ಮಾಡಲು. ಸಿದ್ದರಾಮಯ್ಯರ ಗ್ಯಾರಂಟಿ ಅಂದ್ರೆ ಗಂಡನ ಹತ್ರ ಕಿತ್ತುಕೊಂಡು ಹೆಂಡತಿಗೆ ಕೊಟ್ಟಂತಾಗಿದೆ ಅಷ್ಟೇ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನಾನು ಸಿಎಂ ಆದರೆ ಪ್ರತಿ ಕುಟುಂಬಕ್ಕೆ ಮಾಸಿಕ 5 ಸಾವಿರ ರೂ. ನೀಡುತ್ತೇನೆ: ಶಾಸಕ ಬಸನಗೌಡ ಯತ್ನಾಳ್ - Basangouda Yatnal