ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿರುವ ಅಡ್ಜಸ್ಟ್‌ಮೆಂಟ್ ಗಿರಾಕಿಗಳಿಂದಾಗಿ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸೋಲಾಯಿತು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಸಮಾಧಾನ ಹೊರಹಾಕಿದರು.
ವಿಧಾನಸಭೆಯಲ್ಲಿ ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ನಡೆದ ಚರ್ಚೆಗೆ ಮುಖ್ಯಮಂತ್ರಿಯವರು ಉತ್ತರ ನೀಡುವ ವೇಳೆ, ಚುನಾವಣಾ ಫಲಿತಾಂಶಗಳ ಬಗ್ಗೆ ಚರ್ಚೆಯಾಯಿತು. ರಾಜ್ಯದ ಜನ ನಮಗೆ ಸ್ಪಷ್ಟ ಬಹುಮತ ಕೊಟ್ಟು ಆಯ್ಕೆ ಮಾಡಿದ್ದಾರೆ. ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಬಿಜೆಪಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ರಾಜ್ಯಕ್ಕೆ ಕರೆತಂದು ಗೆಲ್ಲಿಸುತ್ತಿದ್ದರು. ಲೆಕ್ಕವಿಲ್ಲದಷ್ಟು ಸಭೆಗಳು, ರೋಡ್ ಶೋ ಮಾಡಿಸಿದರು. ಆದರೂ ಜನ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ ಎಂದು ಸಿಎಂ ಹೇಳಿದಾಗ, 2018 ರಲ್ಲಿ ನೀವು ಮುಖ್ಯಮಂತ್ರಿಯಾಗಿದ್ದಾಗಲೂ ಜನ ತಿರಸ್ಕಾರ ಮಾಡಿದ್ದರು. ಲೋಕಸಭೆಯಲ್ಲಿ ನಿಮಗೆ ಪ್ರತಿಪಕ್ಷದ ಮಾನ್ಯತೆ ಗಳಿಸುವಷ್ಟು ಸ್ಥಾನಗಳು ಸಿಕ್ಕಿಲ್ಲ ಎಂದು ಆರ್. ಅಶೋಕ್ ಕಿಚಾಯಿಸಿದರು.
2018ರ ಸೋಲನ್ನು ನಾವು ತಲೆಬಾಗಿ ಸ್ವೀಕರಿಸುತ್ತೇವೆ. ಈಗಿನ ಸೋಲನ್ನು ಒಪ್ಪಿಕೊಳ್ಳುವ ಉದಾರತೆಯನ್ನು ಬಿಜೆಪಿ ಪ್ರದರ್ಶಿಸಬೇಕು ಎಂದು ಸಿದ್ದರಾಮಯ್ಯ ತಿಳಿ ಹೇಳಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಬಸನಗೌಡ ಪಾಟೀಲ್ ಯತ್ನಾಳ್, ಬಸವರಾಜ ಬೊಮ್ಮಾಯಿ ಮಾಡಿದ ಕೆಲಸವನ್ನು ನಮ್ಮ ಪಕ್ಷದ ಬಿಜೆಪಿ ನಾಯಕರು ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಾಳು ಮಾಡಿದರು. ಚುನಾವಣೆ ಸೋಲಿಗೆ ಬೊಮ್ಮಾಯಿ ಆಗಲೀ, ಮೋದಿಯಾಗಲೀ ಕಾರಣ ಅಲ್ಲ, ಅಡ್ಜಸ್ಟ್‌ಮೆಂಟ್ ಗಿರಾಕಿಗಳು ಕಾರಣ ಎಂದು ಕಿಡಿಕಾರಿದರು.
ಹೊಂದಾಣಿಕೆ ಯಾರು ಮಾಡಿಕೊಂಡಿದ್ದಾರೆ ಎಂದು ಯತ್ನಾಳ್ ಹೆಸರು ಉಲ್ಲೇಖಿಸಬೇಕು. ಪ್ರತಿ ಬಾರಿಯೂ ಹೇಳಿದ್ದನ್ನೇ ಹೇಳಿ ಗೌಪ್ಯವಾಗಿಡಬಾರದು ಎಂದು ತರಾಟೆಗೆ ತೆಗೆದುಕೊಂಡಾಗ ಈಗಾಗಲೇ ನಾನು ಮಾಧ್ಯಮಗಳ ಮೂಲಕ ಘಂಟಾಘೋಷವಾಗಿ ಸತ್ಯ ಹೇಳಿದ್ದೇನೆ ಎಂದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರು ವಂಶವಾದ ಹಾಗೂ ಭ್ರಷ್ಟಾಚಾರದ ಆಡಳಿತವನ್ನು ಕಿತ್ತು ಹಾಕುತ್ತಾರೆ ಎಂದು ಯತ್ನಾಳ್ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಧಮ್ಕಿ ಸಂಸ್ಕೃತಿಯಿಂದ ಬಂದವರು ಯಾರು?, ಸೆಟ್ಲ್ಮೆಂಟ್ ಮಾಡುವ ಸಂಸ್ಕೃತಿ ನಮ್ಮದಲ್ಲ: ಹೆಚ್ಡಿಕೆ