ಮಂಗಳೂರು: ನಗರದ ಬಂಗ್ರಕೂಳೂರಿನ ಎ.ಜೆ.ಇಂಜಿನಿಯರಿಂಗ್ ಕಾಲೇಜು ರಸ್ತೆ ಮಂಗಳವಾರ ಏಕಾಏಕಿ ಕುಸಿತಗೊಂಡಿದೆ. ರಸ್ತೆ ಮತ್ತಷ್ಟು ಕುಸಿಯುವ ಅಪಾಯ ಇದೆ. ವಾರದ ಹಿಂದೆಯೇ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಸ್ಥಳೀಯ ಕಾರ್ಪೊರೇಟರ್ ಕಿರಣ್ ಕುಮಾರ್ ಅವರು ಮೆಸ್ಕಾಂಗೆ ಮಾಹಿತಿ ನೀಡಿ ವಿದ್ಯುತ್ ಕಂಬಗಳನ್ನು ಶಿಫ್ಟ್ ಮಾಡಿಸಿದ್ದರು. ಮಳೆ ಸ್ವಲ್ಪ ಕಡಿಮೆಯಿದ್ದರೂ ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿದ್ದ ಕಾರಣ ಇಂದು ಬೆಳಗ್ಗೆ ರಸ್ತೆಯ 50 ಮೀಟರ್‌ನಷ್ಟು ಭಾಗ ಕುಸಿದಿದೆ.
ರಸ್ತೆ ಇನ್ನಷ್ಟು ಕುಸಿಯದಂತೆ ಮರಳು ಚೀಲಗಳನ್ನು ಇಡಲಾಗಿದೆ. ಆದರೂ ರಸ್ತೆ ಇನ್ನಷ್ಟು ಕುಸಿತಗೊಳ್ಳುವ ಭೀತಿಯಿದೆ. ರಾಜಕಾಲುವೆಗೆ ಕಟ್ಟಿರುವ ತಡೆಗೋಡೆ ಹಳೆಯದಾಗಿದ್ದರಿಂದ ಈ ರಸ್ತೆ ಕುಸಿತಗೊಂಡಿದೆ ಎನ್ನಲಾಗುತ್ತಿದೆ. ಕುಸಿತಗೊಂಡ ರಸ್ತೆಯಲ್ಲಿ ಯಾರೂ ಹೋಗದಂತೆ ಹಗ್ಗ ಕಟ್ಟಲಾಗಿದೆ. ಈ ಸಂಚಾರಕ್ಕೆ ಈ ರಸ್ತೆಯನ್ನು ಅವಲಂಬಿಸಿ ಸುಮಾರು 10 ಮನೆಗಳಿವೆ. ಅವರಿಗೆ ತಾತ್ಕಾಲಿಕವಾಗಿ ಪರ್ಯಾಯ ರಸ್ತೆಯ ವ್ಯವಸ್ಥೆ ಮಾಡಲಾಗಿದೆ. ಅದೃಷ್ಟವಶಾತ್ ಸದ್ಯದ ಮಟ್ಟಿಗೆ ಯಾವ ಮನೆಗಳಿಗೂ ತೊಂದರೆಯಿಲ್ಲ. ಸ್ಥಳೀಯ ಮಂಗಳೂರು ನಗರ ಪಾಲಿಕೆ ಸದಸ್ಯ ಕಿರಣ್ ಕುಮಾರ್ ಹಾಗೂ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಸ್ವತಃ ಗಾರೆ ಹಿಡಿದು ರಸ್ತೆಹೊಂಡ ಮುಚ್ಚಿದ ಟ್ರಾಫಿಕ್ ಎಸ್ಐ- ವಿಡಿಯೋ ವೈರಲ್ - Traffic SI Fixes Potholes