ಬೆಂಗಳೂರು:ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕೇಸರಿ ಶಾಲು ಹಾಕಿಕೊಳ್ಳಬಾರದಿತ್ತು, ಅವರು ಪಕ್ಷದ ಶಾಲು ಹಾಕಿಕೊಳ್ಳಬೇಕಿತ್ತು. ಆದರೆ ನಾನು ಕೇಸರಿ ಶಾಲು ಹಾಕುವುದಿಲ್ಲ ಎಂಬ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಕುಮಾರಸ್ವಾಮಿ ಅವರು ಬಿಜೆಪಿ ವಕ್ತಾರರಾಗಿದ್ದಾರೆ. ದೇವೇಗೌಡರಿಗೆ ಇಷ್ಟು ನೋವು ತರುತ್ತಾರೆ ಅಂದ್ರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ವಿಧಾನಸೌಧದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರ ಸಿದ್ಧಾಂತವನ್ನು ನಾನು ಕಂಡಿದ್ದೇನೆ. ಮಕ್ಕಳಿಗಾಗಿ ಅವರು ಏನೆಲ್ಲಾ ಮಾಡಬೇಕು. ನನಗೆ ವಯಸ್ಸಾದ ಮೇಲೆ ನಮ್ಮ ಮನೆಗಳಲ್ಲಿ ಯಾವೆಲ್ಲಾ ಸಮಸ್ಯೆಗಳು ಬರುತ್ತವೆಯೋ ಗೊತ್ತಿಲ್ಲ. ಇದನೆಲ್ಲಾ ನೋಡಿದರೆ ನನಗೂ ಭಯವಾಗುತ್ತದೆ. ಪರಿಸ್ಥಿತಿ ನಾವು ನಂಬಿದ ಸಿದ್ಧಾಂತಕ್ಕೆ ವಿರುದ್ಧವಾಗಿ ಹೋಗಬೇಕಾಗುವಂತೆ ಮಾಡುತ್ತದೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ ಎಂದು ತಿಳಿಸಿದರು.
ಕುಮಾರಸ್ವಾಮಿ ಕುಟುಂಬದವರು ಕಲ್ಲು ಹೊಡೆದಿರುವ ಪಟ್ಟಿ ನೀಡಬೇಕೆ?: ಕನಕಪುರದಲ್ಲಿ ಕಲ್ಲು ಹೊಡೆಯುವವರನ್ನು ಶಾಸಕರು ಸಂಸದರನ್ನಾಗಿ ಮಾಡಿದರೆ ದೇಶ ಒಡೆಯುತ್ತಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಕನಕಪುರದ ಜನರನ್ನು ಕೇಳಿ, ಅವರು ಅವರ ಮನೆಯವರೂ ಕಲ್ಲು ಹೊಡೆಯುತ್ತಿದ್ದರಲ್ಲ. ಅದರ ಪಟ್ಟಿ ನೀಡಲಾ? ಎಲ್ಲ ಪಟ್ಟಿ ನೀಡಲು ಕಳೆದ ಅಧಿವೇಶನದಲ್ಲಿ ಕಾದುಕುಳಿತಿದ್ದೆ ಎಂದು ವ್ಯಂಗ್ಯವಾಡಿದರು.
ಕಾರ್ಯಕರ್ತರಿಗೆ ನಿಗಮ ಮಂಡಳಿ ನೇಮಕ ವಿಚಾರ ಕುರಿತು ಪತ್ರಕರ್ತರು ಕೇಳಿದಾಗ, ಬಜೆಟ್ ತಯಾರಿ ವಿಚಾರವಾಗಿ ನಾನು ಹಾಗೂ ಮುಖ್ಯಮಂತ್ರಿಗಳು ನಿರತವಾಗಿದ್ದೆವು. ಈ ವಿಚಾರವಾಗಿ ಯಾರಿಗೆ ಯಾವ ನಿರ್ದೇಶನ ನೀಡಬೇಕೋ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದರು. ಮಾಜಿ ಸಚಿವ ಬಿ.ಶಿವರಾಮ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಯಾರೋಬ್ಬರೂ ಅನಗತ್ಯವಾಗಿ ಮಾಧ್ಯಮಗಳ ಮುಂದೆ ಮಾತನಾಡುವಂತಿಲ್ಲ. ಮಾತನಾಡಿದರೆ ಶೋಕಾಸ್ ನೋಟೀಸ್ ಜಾರಿ ಮಾಡುತ್ತೇವೆ ಎಂದು ಹೇಳಿದರು.
ನಾವು ತಪ್ಪು ಮಾಡಿದ್ದರೆ, ಡಬಲ್ ಎಂಜಿನ್ ಸರ್ಕಾರ ಸರಿಪಡಿಸಲಿಲ್ಲ ಯಾಕೆ ? : 14 ಮತ್ತು 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆಯಲ್ಲಿ ಕುಸಿತಕ್ಕೆ ಆಗಿನ ಕಾಂಗ್ರೆಸ್ ಸರ್ಕಾರ ಸರಿಯಾಗಿ ವಿಚಾರ ಮಂಡನೆ ಮಾಡಿಲ್ಲ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದಾಗ, ನಮ್ಮಿಂದ ತಪ್ಪಾಗಿದ್ದರೆ ಅವರು ಏನು ಮಾಡುತ್ತಿದ್ದರು? ನಮ್ಮ ತಪ್ಪನ್ನು ಸರಿಪಡಿಸ ಬಹುದಾಗಿತ್ತಲ್ಲವೇ?
ಅವರದ್ದು ಡಬಲ್ ಎಂಜಿನ ಸರ್ಕಾರ ಇತ್ತಲ್ಲವೇ. ರಾಜ್ಯಕ್ಕೆ ಬರಬೇಕಾದ ಅನುದಾನ ತರುವುದು ಡಬಲ್ ಎಂಜಿನ್ ಸರ್ಕಾರದ ಜವಾಬ್ದಾರಿ ಆಗಿರಲಿಲ್ಲವೇ? ಆ ಸರ್ಕಾರ ಜನರ ಹಿತಕ್ಕೆ ವಿರುದ್ಧವಾಗಿ ಕೆಲಸ ಮಾಡಿತ್ತು. ನಾವು ಸೂಕ್ತ ದಾಖಲೆಗಳನ್ನು ಸಲ್ಲಿಸಿದ್ದು, ಈಗಲಾದರೂ ಕೇಂದ್ರ ಬಿಜೆಪಿ ಸರ್ಕಾರ ಸರಿಪಡಿಸಲಿ ಎಂದು ಸವಾಲು ಹಾಕಿದರು.
ಇದನ್ನೂಓದಿ:ಮಂಡ್ಯ ಬಂದ್, ಹೋರಾಟ ಯಾವ ಪುರುಷಾರ್ಥಕ್ಕೆ: ಜೆಡಿಎಸ್ ಬಿಜೆಪಿ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ