ಬೆಂಗಳೂರು: ಭಾರತದ ಪ್ರಮುಖ ಖಾಸಗಿ ಜೀವ ವಿಮಾ ಸಂಸ್ಥೆಗಳಲ್ಲಿ ಒಂದಾದ ಬಜಾಜ್ ಅಲಾಯನ್ಸ್ ಲೈಫ್ ಭಾನುವಾರ ಚಂದ್ರಯಾನ, ಸೌರ ಮಿಷನ್ ಆದಿತ್ಯ-ಎಲ್1 ಯೋಜನೆಗಳ ಮೂಲಕ ಗಮನಾರ್ಹ ಸಾಧನೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಯಶಸ್ಸನ್ನು ಸಂಭ್ರಮಿಸಲು ಬೆಂಗಳೂರಿನ ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಪ್ಲಾಂಕಥಾನ್‌ನ ನಾಲ್ಕನೇ ಆವೃತ್ತಿ ಆಯೋಜಿಸಿತ್ತು.
ಈ ಪ್ಲಾಂಕಥಾನ್ ಕಾರ್ಯಕ್ರಮ ಕಂಪನಿಯ ಅತ್ಯಂತ ಜನಪ್ರಿಯ ಪ್ಲಾಂಕ್ ಫಾರ್ ಏಸಸ್ ಅಭಿಯಾನದ ಆಚರಣೆಯಾಗಿದ್ದು, ಪ್ಲಾಂಕ್ ಮಾಡುವ ಅತಿ ದೊಡ್ಡ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ಇಸ್ರೋದ ವಿಜ್ಞಾನಿಗಳಿಗೆ ಧನ್ಯವಾದ ತಿಳಿಸಿತು. ಪ್ಲಾಂಕಥಾನ್ ಕಾರ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಕೆಪಾಸಿಟಿ ಬಿಲ್ಡಿಂಗ್ ಆ್ಯಂಡ್ ಪಬ್ಲಿಕ್ ಔಟ್ ರೀಚ್ ವಿಭಾಗದ ನಿರ್ದೇಶಕ ಎನ್.ಸುಧೀರ್ ಕುಮಾರ್ ನೇತೃತ್ವದ ಇಸ್ರೋ ವಿಜ್ಞಾನಿಗಳ ತಂಡ ಭಾಗವಹಿಸಿತ್ತು.
ಮಿಷನ್ ಮಂಗಲ್ ಸೇರಿದಂತೆ ಹಲವಾರು ಜನಪ್ರಿಯ ಹಿಂದಿ ಚಲನಚಿತ್ರಗಳಲ್ಲಿ ನಟಿಸಿರುವ ಮತ್ತು ಇತ್ತೀಚಿನ ಡಂಕಿ ಸಿನಿಮಾ ಮೂಲಕ ಖ್ಯಾತಿಗಳಿಸಿದ ಭಾರತೀಯ ಚಿತ್ರರಂಗದ ಜನಪ್ರಿಯ ನಟಿ ತಾಪ್ಸಿ ಪನ್ನು ಕಾರ್ಯಕ್ರಮದ ನೇತೃತ್ವವಹಿಸಿ ಆಕರ್ಷಣೆಯ ಬಿಂದುವಾಗಿದ್ದರು. ಈ ಸಂದರ್ಭದಲ್ಲಿ ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್ ಸಿಇಒ ಮತ್ತು ಎಂಡಿ ತರುಣ್ ಚುಗ್ ಮತ್ತು ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್ ಮುಖ್ಯ ಮಾರುಕಟ್ಟೆ ಅಧಿಕಾರಿ ಚಂದ್ರಮೋಹನ್ ಉಪಸ್ಥಿತರಿದ್ದರು.
ಪ್ಲಾಂಕ್ ಫಾರ್ ಏಸಸ್ ಅಭಿಯಾನದಲ್ಲಿ ಎಲ್ಲಾ ವಿಭಾಗಗಳಿಂದ ಒಟ್ಟು 5,194 ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳು ಪ್ಲಾಂಕ್ ಮಾಡುವ ಅತಿದೊಡ್ಡ ಆನ್ಲೈನ್ ವಿಡಿಯೋ ಆಲ್ಬಮ್‌ಗೆ ಹೊಸ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಟೈಟಲ್ ಹೋಲ್ಡರ್ ಎಂದು ಘೋಷಿಸಿದರು.
ಇಸ್ರೋ ಕೆಪಾಸಿಟಿ ಬಿಲ್ಡಿಂಗ್ ಆ್ಯಂಡ್ ಪಬ್ಲಿಕ್ ಔಟ್ ರೀಟ್ ವಿಭಾಗದ ನಿರ್ದೇಶಕ ಎನ್.ಸುಧೀರ್ ಕುಮಾರ್ ಮಾತನಾಡಿ, "ಇದು ನಿಜಕ್ಕೂ ಇಸ್ರೋದ ಚಂದ್ರಯಾನ ಮತ್ತು ಸೌರ ಮಿಷನ್ ಆದಿತ್ಯ-ಎಲ್1 ಸಾಧನೆಗಳನ್ನು ತಿಳಿಸುವ ವಿಶಿಷ್ಠ ಕಾರ್ಯಕ್ರಮ. ಈ ತರಹದ ಯೋಜನೆಗಳು ದೇಶಕ್ಕಾಗಿ ಪ್ರತಿಯೊಬ್ಬರನ್ನು ಪ್ರಾರ್ಥಿಸುವಂತೆ ಮತ್ತು ಒಂದಾಗುವಂತೆ ಮಾಡುತ್ತದೆ. ಸಾಮೂಹಿಕ ಭಾರತೀಯ ಮನೋಭಾವ ಇಲ್ಲಿಯೂ ಪ್ರತಿಬಿಂಬಿಸಿದ್ದಕ್ಕಾಗಿ ನಾನು ಸಂತೋಷಪಡುತ್ತೇನೆ" ಎಂದು ಹೇಳಿದರು.
"ಪ್ಲಾಂಕ್ ಫಾರ್ ಏಸಸ್ ದೇಶದ ಬಗ್ಗೆ ಗೌರವ ಉಂಟುಮಾಡುವ ಮೂಲಕ ಹಲವು ಸಾವಿರ ಜನರನ್ನು ಒಟ್ಟುಗೂಡಿಸಿದೆ. ಜೊತೆಗೆ ಫಿಟ್ ಮತ್ತು ಆರೋಗ್ಯಕರವಾಗಿರಲು ಪ್ರೇರಣೆ ಒದಗಿಸಿದೆ. ಈ ಕಾರ್ಯಕ್ರಮ ಬಾಹ್ಯಾಕಾಶ ಸಂಶೋಧನೆಯ ಹೊಸ ಗಡಿಗಳನ್ನು ಮೀರುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಉತ್ತೇಜಿಸುತ್ತದೆ" ಎಂದರು.
ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್ ಮುಖ್ಯ ಮಾರುಕಟ್ಟೆ ಅಧಿಕಾರಿ ಚಂದ್ರಮೋಹನ್ ಮೆಹ್ರಾ ಮಾತನಾಡಿ, "ಬಜಾಜ್ ಅಲಾಯನ್ಸ್ ಲೈಫ್ ಪ್ಲಾಂಕಥಾನ್ ಭಾರತದ ಪ್ರಮುಖ ಫಿಟ್ನೆಸ್ ಉಪಕ್ರಮವಾಗಿ ವಿಕಸನಗೊಂಡಿದೆ. ಭಾರತದ ಭಾವವನ್ನು ಸೆರೆಹಿಡಿದಿದೆ. ನಮ್ಮೆಲ್ಲರಿಗೂ ಅಪಾರವಾದ ಹೆಮ್ಮೆಯ ಉಂಟುಮಾಡುವ ಇಸ್ರೋದ ಅತ್ಯುತ್ತಮ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಆಫ್ಲೈನ್ ಮತ್ತು ಆನ್ಲೈನ್ನಲ್ಲಿ ಭಾಗವಹಿಸಿದ ಹತ್ತಾರು ಸಾವಿರ ಮಂದಿಗೆ ಕೃತಜ್ಞರಾಗಿದ್ದೇವೆ" ಎಂದು ಹೇಳಿದರು.
ನಟಿ ತಾಪ್ಸಿ ಪನ್ನು ಮಾತನಾಡಿ, "ಈ ಆಂದೋಲನ ವಿಶೇಷವಾಗಿದೆ ಮತ್ತು ಸ್ಪೂರ್ತಿದಾಯಕವಾಗಿದೆ. ಫಿಟ್ನೆಸ್ ಬಗ್ಗೆ ಹೆಚ್ಚು ಒತ್ತು ನೀಡಿದೆ. ಅನೇಕ ಜನರನ್ನು ಒಟ್ಟುಗೂಡಿಸಿದೆ. ಇದು ಇಸ್ರೋದ ವಿಜ್ಞಾನಿಗಳಿಗೆ ಧನ್ಯವಾದ ಸಲ್ಲಿಸುವ ಅವಕಾಶ. ಬಜಾಜ್ ಅಲಾಯನ್ಸ್ ಲೈಫ್ ಇನ್ಶೂರೆನ್ಸ್ ಅವರ ನಾಲ್ಕನೇ ಆವೃತ್ತಿಯ ಪ್ಲಾಂಕಥಾನ್ ಮತ್ತು ಅದಕ್ಕೆ ಹೊಸ ಗಿನ್ನೆಸ್ ವಿಶ್ವ ದಾಖಲೆ ಒದಗಿರುವುದು ಅಭಿನಂದನೆಗೆ ಅರ್ಹವಾಗಿದೆ. ಇಂದು ಪ್ಲ್ಯಾಂಕ್ ಮಾಡಿದ ಮತ್ತು ಪ್ಲಾಂಕ್ ಫಾರ್ ಏಸಸ್ ಅಭಿಯಾನದಲ್ಲಿ ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡಿದ ಪ್ರತಿಯೊಬ್ಬರೂ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡಲಿದ್ದಾರೆ" ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಡ್ರಗ್ಸ್ ಮುಕ್ತ ಕರ್ನಾಟಕ' ಅಭಿಯಾನ; ಜಪ್ತಿ ಮಾಡಿದ್ದ 36 ಕೋಟಿ ಮೌಲ್ಯದ ಮಾದಕ ವಸ್ತುವಿಗೆ ಬೆಂಕಿ