ಬೆಂಗಳೂರು: ಬಾಗಲಕೋಟೆ ಟಿಕೆಟ್ ವಂಚಿತೆ ವೀಣಾ ಕಾಶಪ್ಪನವರ್ ಹಾಗೂ ಬೆಂಬಲಿಗರು ಗುರುವಾರ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರದ ಟಿಕೆಟ್ ಬದಲಾವಣೆ ಮಾಡುವಂತೆ ಒತ್ತಾಯಿಸಿದರು.
ಸಿಎಂ ನಿವಾಸದಲ್ಲಿ ನಡೆದ ಸಭೆಯಲ್ಲಿ, ''ಬಾಗಲಕೊಟೆ ಕ್ಷೇತ್ರದ ಟಿಕೆಟ್ ಬದಲಾವಣೆ ಮಾಡುವುದಿಲ್ಲ. ನಿಮಗೆ ಟಿಕೆಟ್ ಕೊಡುವಂತೆ ಯಾವುದೇ ಜಿಲ್ಲಾ ನಾಯಕರು ಹೇಳಿರಲಿಲ್ಲ. ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವಂತೆ ಮೊದಲೇ ಹೇಳಿದ್ದೆ. ಲೋಕಸಭಾ ಕ್ಷೇತ್ರ ಉಸ್ತುವಾರಿ ಪ್ರಿಯಾಂಕ್ ಖರ್ಗೆಯಿಂದಲೂ ವೀಣಾ ಹೆಸರು ಪ್ರಸ್ತಾಪವಾಗಿಲ್ಲ. ಸಂಯುಕ್ತಾ ಪಾಟೀಲ್ ಪಕ್ಷದ ಕೆಲಸ ಮಾಡಿದ್ದಾರೆ. ಜಿಲ್ಲೆಯ ಐದು ನಾಯಕರು ವೀಣಾ ಹೆಸರು ಹೇಳಲಿಲ್ಲ'' ಎಂದು ಸಿದ್ದರಾಮಯ್ಯ ತಿಳಿಸಿದರು.
ಹೊರಗಿನವರಿಗೆ ಯಾಕೆ ಟಿಕೆಟ್ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ ಬೆಂಬಲಿಗರಿಗೆ, ''ನಾನು ಮೈಸೂರಿನಿಂದ ಬಂದು ಬಾದಾಮಿಯಲ್ಲಿ ಸ್ಪರ್ಧೆ ಮಾಡಿರಲಿಲ್ಲವೇ? ನನ್ನನ್ನು ನೀವು ಆಯ್ಕೆ ಮಾಡಿಲ್ವಾ? ಬಾದಾಮಿಯವರು ಆಯ್ಕೆ ಮಾಡಿರಲಿಲ್ಲವೇ?'' ಎಂದು ಹೇಳಿದರು.
ಕಣ್ಣೀರು ಹಾಕುತ್ತಾ ಸಭೆಯಿಂದ ಹೊರನಡೆದ ವೀಣಾ: ''ಮುಂದಿನ ದಿನಗಳಲ್ಲಿ ರಾಜಕೀಯ ಅಧಿಕಾರ ನೀಡುತ್ತೇನೆ. ಆದರೆ, ಯಾವುದೇ ನಿರ್ದಿಷ್ಟ ಹುದ್ದೆ ಅಂತ ಹೇಳಲಾರೆ" ಎಂದು ಇದೇ ಸಂದರ್ಭದಲ್ಲಿ ಸಿಎಂ ಭರವಸೆ ಕೊಟ್ಟರು. ಸಿಎಂ ಉತ್ತರದಿಂದ ತೃಪ್ತರಾಗದ ವೀಣಾ ಕಾಶಪ್ಪನವರ್, ಅಳುತ್ತಲೇ ಸಭೆಯಿಂದ ಹೊರನಡೆದರು.
ಇದನ್ನೂ ಓದಿ: ಮೇಕೆದಾಟು ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ದ: ಡಿ ಕೆ ಸುರೇಶ್ - Lok Sabha Election 2024