ಶಿವಮೊಗ್ಗ: ರಾಷ್ಟ್ರೀಯ ನಾಯಕರ ಒಪ್ಪಂದದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿಯನ್ನು ಒಟ್ಟಾಗಿ ಗೆಲ್ಲಿಸುತ್ತೇವೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಸ್ತುವಾರಿ ರಘುಪತಿ ಭಟ್ ತಿಳಿಸಿದರು.
ಜೆಡಿಎಸ್ ಶಾಸಕಿ ಶಾರದಾ ಪೂರ್ಯನಾಯ್ಕ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಈಗ ಎನ್‍ಡಿಎ ಮೈತ್ರಿ ಪಕ್ಷವಾಗಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಹೊಂದಾಣಿಕೆಯಾಗಿದ್ದರೂ ಕೂಡ, ಬೂತ್ ಮಟ್ಟದಲ್ಲಿ ಈ ಹೊಂದಾಣಿಕೆಗೆ ಸ್ಪಷ್ಟವಾದ ರೂಪ ಬಂದಿರಲಿಲ್ಲ. ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇದ್ದದ್ದು ನಿಜ. ಆದರೆ ಅದೆಲ್ಲವೂ ಈಗ ಕರಗಿ ನಾವು ಒಟ್ಟಾಗಿದ್ದೇವೆ. ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಅತಿ ಹೆಚ್ಚು ಮತದ ಮೂಲಕ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಲಾಗುವುದು ಎಂದು ಭಟ್ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದ ಪೂರ್ಯನಾಯ್ಕ್ ಮಾತನಾಡಿ, ರಾಷ್ಟ್ರೀಯ ನಾಯಕರು, ಮಾಜಿ ಪ್ರಧಾನಿ ದೇವೇಗೌಡರು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಇಚ್ಛೆಯಂತೆ ಎರಡು ಪಕ್ಷಗಳು ಸೇರಿಕೊಂಡು ಸಮನ್ವಯತೆಯಿಂದ ಎದುರಿಸುತ್ತಿರುವ ಚುನಾವಣೆ ಇದಾಗಿದೆ. ಈ ಚುನಾವಣೆಯಲ್ಲಿ ಎರಡೂ ಪಕ್ಷಗಳಲ್ಲಿ ಹೊಂದಾಣಿಕೆ ಇದೆ. ಎಲ್ಲ ಸಭೆ, ಸಮಾರಂಭಗಳಲ್ಲಿ ಸಮನ್ವಯತೆ ಸಾಧಿಸುತ್ತಿದ್ದೇವೆ. ಗೆಲುವಿಗಾಗಿ ಹಲವು ಸೂತ್ರಗಳನ್ನು ಮಾಡಿದ್ದೇವೆ. ಎಲ್ಲರೂ ಸೇರಿಕೊಂಡು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಅತಿ ಹೆಚ್ಚು ಲೀಡ್‌ನಿಂದ ಗೆಲ್ಲಿಸುತ್ತೇವೆ ಎಂದರು.
ಇದನ್ನೂಓದಿ: ಅಮಿತ್ ಶಾ ಬಂದ ಬಳಿಕ ರಾಜ್ಯದಲ್ಲಿ ಮೋದಿ ಶಕ್ತಿ ಇನ್ನಷ್ಟು ಹೆಚ್ಚಾಗಲಿದೆ: ಆರ್. ಅಶೋಕ್ - R Ashok