ಬೆಂಗಳೂರು: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಸಿಗದೇ ಅಸಮಾಧಾನಗೊಂಡ ನಾಯಕರ ಮನವೊಲಿಸುವಲ್ಲಿ ಪಕ್ಷದ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಬಹುತೇಕ ಸಫಲರಾಗಿದ್ದಾರೆ. ದಾವಣಗೆರೆ, ಬೆಳಗಾವಿಯಲ್ಲಿ ಅಸಮಾಧಾನ ತಣ್ಣಗಾಗಿದೆ. ತುಮಕೂರಿನಲ್ಲಿ ಬಂಡಾಯಕ್ಕೆ ಬ್ರೇಕ್ ಹಾಕಿದ್ದಾರೆ. ಶಿವಮೊಗ್ಗ ಹೊರತುಪಡಿಸಿದರೆ ಇತರೆ ಎಲ್ಲೆಡೆ ಗೊಂದಲಕ್ಕೆ ತೆರೆ ಎಳೆಯುವಲ್ಲಿ ಅವರು ಸಫಲರಾಗಿದ್ದಾರೆ.
ದಾವಣಗೆರೆಯಲ್ಲಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಪತ್ನಿಗೆ ಟಿಕೆಟ್ ನೀಡಿರುವುದಕ್ಕೆ ಮುನಿಸಿಕೊಂಡು ಅಭ್ಯರ್ಥಿ ಪರ ಕೆಲಸ ಮಾಡುವುದಿಲ್ಲ ಎಂಬ ಘೋಷಣೆ ಮಾಡಿದ್ದ ಮಾಜಿ ಸಚಿವ ಎಸ್.ಎ.ರವೀಂದ್ರ ನಾಥ್, ಎಂ.ಪಿ.ರೇಣುಕಾಚಾರ್ಯ ನೇತೃತ್ವದ ನಾಯಕರ ತಂಡದ ಮನವೊಲಿಕೆ ಮಾಡುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ದಾವಣಗೆರೆಯ ಅಪೂರ್ವ ರೆಸಾರ್ಟ್ನಲ್ಲಿ ಅಸಮಾಧಾನಿತರ ಮನವೊಲಿಸುವ ಕಾರ್ಯ ನಡೆಸಿದ ಅವರು ಎಸ್.ಎ.ರವೀಂದ್ರನಾಥ್ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕು. ಮೋದಿ ಅವರಿಗಾಗಿ ಪಕ್ಷವನ್ನು ಗೆಲ್ಲಿಸಬೇಕು ಎನ್ನುವ ಸಂದೇಶ ನೀಡಿ ಕೈಮುಗಿದು ಮನವಿ ಮಾಡಿದರು. ಹಿರಿಯ ನಾಯಕ ಕೈ ಮುಗಿಯುತ್ತಿದ್ದಂತೆ ಕುದಿಯುತ್ತಿದ್ದ ಅಸಮಾಧಾನಿತರು ತಣ್ಣಗಾದರು. ಕೈ ಮುಗಿಯದಂತೆ ಮನವಿ ಮಾಡಿ, ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುವ ಭರವಸೆ ನೀಡಿದರು.
ಬೆಳಗಾವಿಯಲ್ಲಿಯೂ ಗೋ ಬ್ಯಾಕ್ ಜಗದೀಶ್ ಶೆಟ್ಟರ್ ಅಭಿಯಾನಕ್ಕೆ ಬಿಎಸ್‌ವೈ ಬ್ರೇಕ್ ಹಾಕಿದ್ದಾರೆ. ಅಸಮಾಧಾನಿತ ನಾಯಕರೊಂದಿಗೆ ಸಭೆ ನಡೆಸಿದ ಯಡಿಯೂರಪ್ಪ, ದೊಡ್ಡ ಮೆರವಣಿಗೆ ಮೂಲಕ ಪಕ್ಷದಲ್ಲಿನ ಒಗ್ಗಟ್ಟು ಪ್ರದರ್ಶಿಸಿದರು. ಅಭ್ಯರ್ಥಿ ಪರ ಕೆಲಸ ಮಾಡಲು ಅಸಮಾಧಾನಿತ ನಾಯಕರಿಂದ ಭರವಸೆ ಪಡೆದುಕೊಂಡರು.
ತುಮಕೂರಿನಲ್ಲಿ ಪಕ್ಷಕ್ಕಾಗುವ ಡ್ಯಾಮೇಜ್ ಅನ್ನು ಅರ್ಧ ಕಡಿಮೆ ಮಾಡುವಲ್ಲಿ ಯಡಿಯೂರಪ್ಪ ಸಫಲರಾಗಿದ್ದಾರೆ. ಮಾಧುಸ್ವಾಮಿ ಪಕ್ಷ ತೊರೆಯುವ ಅಥವಾ ಬಂಡಾಯವಾಗಿ ಸ್ಪರ್ಧೆ ಮಾಡುವ ನಿಲುವು ಬದಲಿಸಿ ಪಕ್ಷದಲ್ಲಿಯೇ ಉಳಿದುಕೊಳ್ಳುವಂತೆ ಮನವೊಲಿಕೆ ಮಾಡಿರುವ ಯಡಿಯೂರಪ್ಪ, ಚುನಾವಣೆ ನಂತರ ಬೇರೆ ಭವಿಷ್ಯದ ಭರವಸೆ ನೀಡಿದ್ದಾರೆ. ಹಾಗಾಗಿ ಮಾಧುಸ್ವಾಮಿ ಪಕ್ಷ ತೊರೆಯುವ ನಿರ್ಧಾರ ಕೈಬಿಟ್ಟಿದ್ದಾರೆ. ಆದರೆ ಸೋಮಣ್ಣ ಪರ ಪ್ರಚಾರಕ್ಕೆ ಮಾತ್ರ ಸಮ್ಮತಿ ನೀಡಿಲ್ಲ. ಹಾಗಾಗಿ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಇಲ್ಲದೇ ಇದ್ದರೂ ಸಹಕಾರದ ಕೊರತೆಯಾಗಲಿದೆ.
ಶಿವಮೊಗ್ಗದಲ್ಲಿ ಬಂಡಾಯ ಬಹುತೇಕ ಖಚಿತವಾಗಿದೆ. ರೆಬೆಲ್ ನಾಯಕರಾಗಿರುವ ಕೆ.ಎಸ್.ಈಶ್ವರಪ್ಪ, ಯಡಿಯೂರಪ್ಪ ಕುಟುಂಬದ ವಿರುದ್ಧ ನೇರ ವಾಗ್ದಾಳಿ ಮುಂದುವರೆಸಿದ್ದು, ಸ್ಪರ್ಧೆಯ ಪುನರುಚ್ಛಾರ ಮಾಡಿ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಿರಿಯರು ಸಂಘದ ಪ್ರಚಾರಕರ ಸಂಧಾನಕ್ಕೂ ಅವರು ಬಗ್ಗಿಲ್ಲ. ಹಾಗಾಗಿ ಈಶ್ವರಪ್ಪ ಸಂಧಾನವನ್ನು ಯಡಿಯೂರಪ್ಪ ಕೈಬಿಟ್ಟಿದ್ದಾರೆ. ಹೈಕಮಾಂಡ್ ನಾಯಕರೇ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎನ್ನುವ ಸಂದೇಶವನ್ನು ರವಾನಿಸಿದ್ದಾರೆ. ಹಾಗಾಗಿ ಶಿವಮೊಗ್ಗ ವಿಚಾರದಲ್ಲಿ ಸದ್ಯ ಯಾವುದೇ ಬೆಳವಣಿಗೆಯಾಗಿಲ್ಲ.
ಚಿತ್ರದುರ್ಗದಲ್ಲಿ ಹಾಲಿ ಸಂಸದ ನಾರಾಯಣಸ್ವಾಮಿಗೆ ವಿರೋಧವಿದ್ದು, ಮಾಜಿ ಡಿಸಿಎಂ ಗೋವಿಂದ ಕಾರಜೋಳಗೆ ಟಿಕೆಟ್ ನೀಡಲಾಗಿದೆ.
ಇದನ್ನೂ ಓದಿ: ಮೋದಿ ಗ್ಯಾರಂಟಿ ಟಿವಿಯಲ್ಲಿ, ನಮ್ಮ ಗ್ಯಾರಂಟಿ ಜನರ ಕೈಯಲ್ಲಿ: ಪ್ರಿಯಾಂಕ್ ಖರ್ಗೆ - Priyank Kharge
ಈ ಕುರಿತು ಮಾಹಿತಿ ನೀಡಿರುವ ಬಿಎಸ್‌ವೈ, ಟಿಕೆಟ್ ಸಿಗದೇ ಅಸಮಾಧಾನಗೊಂಡಿರುವ ಮಾಧುಸ್ವಾಮಿ ಪಕ್ಷ ಬಿಡಲ್ಲ, ಪಕ್ಷದಲ್ಲೇ ಮುಂದುವರೆಯುವ ಭರವಸೆ ನೀಡಿದ್ದಾರೆ. ಅವರ ಜೊತೆ ಚುನಾವಣೆ ಬಗ್ಗೆ ಚರ್ಚಿಸಿಲ್ಲ. ಯಾವ ಚರ್ಚೆ ಎನ್ನುವ ಮಾಹಿತಿ ಈಗ ನೀಡಲ್ಲ. ಅವರು ಪಕ್ಷದಲ್ಲಿ ಮುಂದುವರೆಯಲಿದ್ದಾರೆ ಎಂದಷ್ಟೇ ಹೇಳಬಲ್ಲೆ. ಆದರೆ ಸೋಮಣ್ಣ ಪರ ಪ್ರಚಾರ ಮಾಡುವುದು ಮಾಧುಸ್ವಾಮಿಗೆ ಬಿಟ್ಟ ವಿಚಾರ ಎಂದರು.
ದಾವಣಗೆರೆಯಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸರಿಪಡಿಸಿದ್ದೇನೆ. ಬೆಳಗಾವಿಯಲ್ಲಿಯೂ ಮನವೊಲಿಕೆ ಮಾಡಿದ್ದೇನೆ. ಒಗ್ಗಟ್ಟಿನ ಜಪ ಮಾಡಿದ್ದಾರೆ. ತಪ್ಪು ಗ್ರಹಿಕೆ ಪ್ರಶ್ನೆ ಇಲ್ಲ. ಎಲ್ಲರೂ ಒಟ್ಟಾಗಿ ಹೋಗುತ್ತೇವೆ. ಶಿವಮೊಗ್ಗದಲ್ಲಿಯೂ ಈಶ್ವರಪ್ಪ ಜೊತೆ ಮಾತನಾಡುತ್ತಿದ್ದೇವೆ. ಸರಿಹೋಗಲಿದೆ ಎನ್ನುವ ವಿಶ್ವಾಸ ಇದೆ. ಅವರೂ ನಮ್ಮವರೇ, ಗೊಂದಲ ಇರುವುದು ನಿಜ, ಅವರೊಂದಿಗೆ ಮಾತನಾಡಿ ಎಲ್ಲವನ್ನೂ ಸರಿಪಡಿಸಲಾಗುತ್ತದೆ. ವಿಶೇಷ ಕಾರಣಕ್ಕೆ ಚಿತ್ರದುರ್ಗ ಬಾಕಿ ಇದೆ ಎಂದು ತಿಳಿಸಿದರು.
ಇನ್ನು ಪ್ರಹ್ಲಾದ್ ಜೋಷಿ ವಿರುದ್ಧ ದಿಂಗಾಲೇಶ್ವರ ಶ್ರೀ ಸೇರಿದಂತೆ ವಿರೋಧ ಮಾಡುತ್ತಿರುವ ಎಲ್ಲಾ ಶ್ರೀಗಳೊಂದಿಗೆ ಮಾತನಾಡುತ್ತೇನೆ. ತಪ್ಪು ಗ್ರಹಿಕೆ ಸರಿಪಡಿಸಲಾಗುತ್ತದೆ. ಮಠಾಧೀಶರ ಜೊತೆ ಮಾತನಾಡುತ್ತೇನೆ. ಬೇಸರವಿದ್ದರೆ ಸರಿಪಡಿಸಲಾಗುತ್ತದೆ ಎಂದರು.