ಬೆಳಗಾವಿ: ಒಂದು ಕಾಲಕ್ಕೆ ಬೆಳಗಾವಿ ನಗರದ ಜೀವ ಸೆಲೆಯಾಗಿದ್ದ ಆ ನಾಲಾ, ಇಂದು ಶಾಪವಾಗಿ ಮಾರ್ಪಟ್ಟಿದೆ. ಸರ್ಕಾರ, ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಪ್ರತಿ ವರ್ಷ ಮಳೆಗಾಲದಲ್ಲಿ ರೈತರು ಮತ್ತು ನಾಗರಿಕರಿಗೆ ಗೋಳು ತಪ್ಪಿದ್ದಲ್ಲ. ಶಾಶ್ವತ ಪರಿಹಾರಕ್ಕೆ ಮುಂದಾಗದ ಆಡಳಿತಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಹೌದು, ಬೆಳಗಾವಿ ತಾಲ್ಲೂಕಿನ ಯಳ್ಳೂರಿನಲ್ಲಿ ಹುಟ್ಟಿ ಹರಿಯುವ ಬಳ್ಳಾರಿ ನಾಲಾ ಒಂದು ಕಾಲದಲ್ಲಿ ಈ ಭಾಗದ ಜೀವ ಸೆಲೆಯಾಗಿತ್ತು. ಸಹಜ ಝರಿ ನೀರಿನಿಂದ ನಾಲಾ ತುಂಬಿರುತ್ತಿತ್ತು. ಅದೇ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗುತ್ತಿತ್ತು. ಬರೋಬ್ಬರಿ 28 ಕಿ.ಮೀ. ಹೆಚ್ಚು ವಿಸ್ತಾರವಾಗಿ ಹರಿಯುವ ಈ ನಾಲಾ ಈಗ ನಿರ್ಲಕ್ಷ್ಯದಿಂದ ಕಲುಷಿತ ನೀರಿನ ಚರಂಡಿಯಾಗಿ ಬದಲಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಅನಗೋಳ, ಶಹಾಪುರ, ವಡಗಾಂವ್, ಜುನೆ ಬೆಳಗಾವಿ, ಮಾಧವಪುರ, ಹಲಗಾ ಭಾಗದ ನೂರಾರು ಎಕರೆ ಪ್ರದೇಶಕ್ಕೆ ನಗರದ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ರೈತರು ಲಕ್ಷಾಂತರ ರೂ. ಹಾನಿ ಅನುಭವಿಸುವಂತಾಗಿದೆ. ಅಲ್ಲದೆ ನಾಲಾ ನೀರು ಮನೆಗಳಿಗೂ ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಳಿಸುತ್ತದೆ.
ಅನೇಕ ವರ್ಷಗಳಿಂದ ಬಳ್ಳಾರಿ ನಾಲಾ ಅಭಿವೃದ್ಧಿ ಪಡಿಸುವಂತೆ ಇಲ್ಲಿನ ರೈತರು, ನಾಗರಿಕರು ಹೋರಾಟ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ಈ ನಾಲಾ ಪಕ್ಕದಲ್ಲಿ ಫಲವತ್ತಾದ ಜಮೀನು ಇದ್ದು, ಇಂದ್ರಾಣಿ, ಭಾಸುಮತಿ ಭತ್ತ, ವಿವಿಧ ತರಕಾರಿ, ಚನ್ನಂಗಿ ಬೇಳೆ ಸೇರಿ ಮತ್ತಿತರ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಆದರೆ, ಮಳೆಗಾಲದಲ್ಲಿ ನಾಲಾ ಉಕ್ಕಿ ಹರಿಯೋದ್ರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೇ ನಾಲಾದಲ್ಲಿ ಸಣ್ಣ ಕಾರ್ಖಾನೆಗಳ ನೀರು, ನಗರದ ಚರಂಡಿಗಳ ನೀರು ಸೇರಿ ಕೊಳಚೆಯಾಗಿ, ರೋಗ ರುಜಿನಿಗಳ ತಾಣವಾಗಿದೆ.
ಬಳ್ಳಾರಿ ನಾಲಾ ಅಭಿವೃದ್ಧಿಗೆ ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಹೊಸ ಬಡಾವಣೆ, ಲೇಔಟ್ ನಿರ್ಮಾಣ ಆಗುತ್ತಿಲ್ಲ. ಅಷ್ಟೇ ಅಲ್ಲದೇ ಬೆಳಗಾವಿ ದಕ್ಷಿಣ ಭಾಗದ ಅಭಿವೃದ್ಧಿಗೂ ಇದು ಕಂಟಕವಾಗಿದೆ. ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡವರು ಮಳೆಗಾಲದಲ್ಲಿ ಮನೆ ಬಿಟ್ಟು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಬಳ್ಳಾರಿ ನಾಲಾದ 30 ಕಿಮೀ ಹೂಳೆತ್ತಿ ಅಭಿವೃದ್ಧಿ ಪಡಿಸುವಂತೆ ರೈತರು ಆಗ್ರಹಿಸಿದರೂ ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಜಿಲ್ಲಾಡಳಿತಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ರೈತ ಮುಖಂಡ ಪ್ರಕಾಶ ನಾಯಿಕ್ ಈಟಿವಿ ಭಾರತ ಜೊತೆಗೆ ಮಾತನಾಡಿ, ಮಳೆಗಾಲದಲ್ಲಿ ಬಳ್ಳಾರಿ ನಾಲಾದಲ್ಲಿ ಮಳೆ ಅವಾಂತರ ಸೃಷ್ಟಿಸಿದರೆ, ಇನ್ನುಳಿದ ಸಮಯದಲ್ಲಿ ಕೊಳಚೆ, ಪ್ಲಾಸ್ಟಿಕ್ ಕಸ ಸಮಸ್ಯೆ ತಂದೊಡ್ಡುತ್ತಿದೆ. ಪ್ರತಿ ವರ್ಷವೂ ಕೋಟ್ಯಾಂತರ ರೂ. ಖರ್ಚು ಮಾಡಿ ತಾತ್ಕಾಲಿಕವಾಗಿ ನಾಲಾ ಸ್ವಚ್ಛಗೊಳಿಸುತ್ತಾರೆ. ಆದರೆ, ಇದರಿಂದ ಏನೂ ಉಪಯೋಗ ಆಗುತ್ತಿಲ್ಲ. ಶಾಶ್ವತ ಪರಿಹಾರ ಕಲ್ಪಿಸಲು ನೀರು ಸರಾಗವಾಗಿ ಹರಿಯುವಂತೆ ಎರಡೂ ಬದಿ ಕಲ್ಲಿನಿಂದ ಗಟ್ಟಿ ಮುಟ್ಟಾಗಿ ನಾಲಾ ನಿರ್ಮಿಸುವಂತೆ ಆಗ್ರಹಿಸಿದರು.
ಹೋರಾಟಗಾರ ಶ್ರೀನಿವಾಸ ತಾಳೂಕರ್ ಮಾತನಾಡಿ, ಯಳ್ಳೂರು, ಧಾಮಣೆಯಿಂದ ಹರಿದು ಬರುವ ಬಳ್ಳಾರಿ ನಾಲಾ ಮುಂದೆ ಹೋಗಿ ಗೋಕಾಕ್ ತಾಲ್ಲೂಕಿನಲ್ಲಿ ಘಟಪ್ರಭಾ ನದಿ ಸೇರುತ್ತದೆ. ಸುಮಾರು 20 ವರ್ಷಗಳಿಂದ ಈ ನಾಲಾ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಒಂದೆಡೆ ರೈತರ ಬೆಳೆ ಹಾನಿ ಆಗುತ್ತಿದ್ದರೆ, ಮತ್ತೊಂದೆಡೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ನೇಕಾರರ ಬದುಕಿಗೂ ಕೊಳ್ಳಿ ಇಡುತ್ತಿದೆ. ಹಾಗಾಗಿ, ಇನ್ಮುಂದೆಯಾದ್ರೂ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸರ್ಕಾರ ಈ ಬಗ್ಗೆ ಗಮನಹರಿಸುವಂತೆ ಆಗ್ರಹಿಸಿದರು.
ಈ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲ ಪ್ರತಿಕ್ರಿಯಿಸಿದ್ದು, ಬಳ್ಳಾರಿ ನಾಲಾ ವಿಚಾರವಾಗಿ ಈಗಾಗಲೇ ನೀರಾವರಿ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ದೊಡ್ಡ ಮೊತ್ತದ ಅನುದಾನದ ಅವಶ್ಯವಿರುವ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ ಎಂದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಬಳ್ಳಾರಿ ನಾಲಾ ಅಗಲೀಕರಣ ಮಾಡುವ ಪ್ರಸ್ತಾವನೆ ಇದೆ. ನೀರು ಜಾಸ್ತಿ ಆದಾಗ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗುತ್ತದೆ. ಇನ್ನು ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಆದರೆ, ಇದಕ್ಕೆ ಹೆಚ್ಚು ಭೂಮಿ ಹೋಗುತ್ತದೆ ಎನ್ನುವ ಆತಂಕ ರೈತರಿಗಿದೆ. ಹಾಗಾಗಿ, ನಾಲಾವನ್ನು ಜಾಸ್ತಿ ಅಗಲೀಕರಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಮಳೆಗಾಲ ಆರಂಭವಾಗುತ್ತಿದೆ. ಈ ಬಾರಿಯೂ ಬಳ್ಳಾರಿ ನಾಲಾ ಸಮಸ್ಯೆಯಿಂದ ಬೆಳಗಾವಿ ರೈತರು ಮತ್ತು ನಾಗರಿಕರು ಅನುಭವಿಸುವ ಸಾಧ್ಯತೆ ಹೆಚ್ಚಿದೆ. ಆದ್ರೂ ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳದ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಕಣ್ಮುಚ್ಚಿ ಕುಳಿತಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಬಳ್ಳಾರಿ ನಾಲಾ ಹಾವಳಿಯಿಂದ ತಮ್ಮನ್ನು ಪಾರು ಮಾಡುವಂತೆ ಈ ಭಾಗದ ಜನ ಕೇಳಿಕೊಳ್ಳುತ್ತಿದ್ದು, ಜಿಲ್ಲಾಡಳಿತ ಈ ಬಾರಿಯಾದ್ರೂ ಜನರ ಸಮಸ್ಯೆಗೆ ಸ್ಪಂದಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.