ಬೆಂಗಳೂರು: ಮದುವೆ ಸಮಾರಂಭದಲ್ಲಿ ಫೋಟೋ ತೆಗೆಯುವ ವಿಚಾರಕ್ಕೆ ಆರಂಭವಾದ ಗಲಾಟೆಯಲ್ಲಿ ಉದ್ರಿಕ್ತರ ಗುಂಪೊಂದು ಫೋಟೋಗ್ರಾಫರ್ಸ್ ಮೇಲೆ ಹಲ್ಲೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತಡರಾತ್ರಿ ಶಿವಾಜಿನಗರದ ಶಮ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಜಯಂತ್ ಹಾಗೂ ರಘು ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ.
ಮದುವೆ ಸಮಾರಂಭದಲ್ಲಿ ಫೋಟೋ, ವೀಡಿಯೋಗ್ರಫಿಗೆ ಹೋಗಿದ್ದ ಜಯಂತ್ ಹಾಗೂ ರಘು ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಊಟದ ಹಾಲ್ನಲ್ಲಿ ಫೋಟೋ ತೆಗೆಯುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಮತ್ತೊಂದು ಗುಂಪಿನವರು ಫೋಟೋ ಕ್ಲಿಕ್ಕಿಸುವಂತೆ ಒತ್ತಾಯಿಸಿದ್ದರು. ಈ ವೇಳೆ ಫೋಟೋ ತೆಗೆಯಲಿಲ್ಲ ಎಂದು ಸಿಟ್ಟಿಗೆದ್ದ ಗುಂಪೊಂದು ಇಬ್ಬರ ಮೇಲೆ ಹಲ್ಲೆ ಮಾಡಿದೆ.
ಗಾಯಾಳುಗಳಿಬ್ಬರು ಚಿಕಿತ್ಸೆ ಪಡೆದುಕೊಂಡಿದ್ದು, ಭಾರತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ತಮಾಷೆಗಾಗಿ ಮೊಬೈಲ್ ಕಸಿದುಕೊಂಡಿದ್ದಕ್ಕೆ ಸ್ನೇಹಿತರ ನಡುವೆ ಕಿರಿಕ್: ಹಲ್ಲೆ ಮಾಡಿದ ನಾಲ್ವರ ಬಂಧನ - Bengaluru Assault Case