ಬೆಂಗಳೂರು: ನಗರದಲ್ಲಿ ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳ ಹೆಸರಿನಲ್ಲಿ ಅಕ್ರಮವಾಗಿ ಸಾರ್ವಜನಿಕರಿಂದ ಮೊಬೈಲ್ ಸಿಡಿಆರ್ (ಕರೆ ವಿವರಗಳ ದಾಖಲೆ) ರಹಸ್ಯವಾಗಿ ಆಲಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸ್ ಸಿಬ್ಬಂದಿ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ ಹಾಗೂ ಪ್ರಕರಣದ ಕಿಂಗ್ ಪಿನ್ ನಾಗೇಶ್ವರ ರೆಡ್ಡಿ ಬಂಧಿತರು.
ಮೇ ತಿಂಗಳಲ್ಲಿ ಮಹಾನಗರಿ ಡಿಟೆಕ್ಟಿವ್ ಹಾಗೂ ಸೆಕ್ಯೂರಿಟಿ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಎಂಬ ಹೆಸರಿನ ಕಚೇರಿಗಳಲ್ಲಿ ಪರಿಶೀಲನೆ ನಡೆಸಿ ಅನಧಿಕೃತವಾಗಿ ಸಿಡಿಆರ್ ಪಡೆಯುತ್ತಿದ್ದ ಆರೋಪದಡಿ ಮೂರು ಪ್ರಕರಣಗಳನ್ನು ದಾಖಲಿಸಿ ಆರೋಪಿಗಳಾದ ಪುರುಷೋತ್ತಮ, ಸತೀಶ್ ಕುಮಾರ್, ತಿಪ್ಪೇಸ್ವಾಮಿ, ಮಹಾಂತಗೌಡ, ರೇವಂತ, ಗುರುಪಾದಸ್ವಾಮಿ, ಶ್ರೀನಿವಾಸ ಮತ್ತು ಭರತ್ ಎಂಬವರನ್ನು ಬಂಧಿಸಲಾಗಿತ್ತು. ಬಂಧಿತ ನಾಗೇಶ್ವರ ರೆಡ್ಡಿಗೆ ಸಿಡಿಆರ್ ನೀಡುತ್ತಿದ್ದ ಆರೋಪದಡಿ ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ ಎಂಬಾತನನ್ನು ಸೆರೆ ಹಿಡಿಯಲಾಗಿದೆ.
ಮುನಿರತ್ನ ಹಲವು ವರ್ಷಗಳಿಂದ ಸಿಐಡಿ ಟೆಕ್ನಿಕಲ್ ಸೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಹಿರಿಯ ಅಧಿಕಾರಿಗಳು ಕೇಸ್ ಸಂಬಂಧ ಅಧಿಕೃತವಾಗಿ ಸಿಡಿಆರ್ ಪಡೆಯಲು ಸರ್ವಿಸ್ ಪ್ರೊವೈಡರ್ಗಳಿಗೆ ನೀಡುವ ಪತ್ರದಲ್ಲಿ ತನಗೆ ಬೇಕಾದ ಫೋನ್ ನಂಬರ್ಗಳನ್ನು ಸೇರಿಸಿ ಸಿಡಿಆರ್ ಪಡೆಯುತ್ತಿದ್ದ. ಸಿಡಿಆರ್ ಬಂದ ನಂತರ ಅಧಿಕೃತವಾದ ಸಿಡಿಆರ್ಗಳನ್ನು ಅಧಿಕಾರಿಗಳಿಗೆ ನೀಡಿ ಅನಧಿಕೃತ ಸಿಡಿಆರ್ಗಳನ್ನು ನಾಗೇಶ್ವರ ರೆಡ್ಡಿಗೆ ನೀಡುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ದಂಪತಿ, ಪ್ರೇಮಿಗಳ ನಡುವಿನ ಗುಮಾನಿಗೆ ಅಧಿಕ ಸಿಡಿಆರ್ ಬಳಕೆ: ಈ ಸಿಡಿಆರ್ ಪಡೆಯುತ್ತಿದ್ದವರು ಹೆಚ್ಚಾಗಿ ಪತಿ-ಪತ್ನಿ ಮತ್ತು ಪ್ರೇಮಿಗಳು ಸಂಬಂಧದಲ್ಲಿ ಅನುಮಾನ ಮೂಡಿ ತಮ್ಮ ಪ್ರೀತಿ ಪಾತ್ರರು ಯಾರ ಸಂಪರ್ಕದಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕರೆ ವಿವರವನ್ನು ಅನಧಿಕೃತವಾಗಿ ಪಡೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅಷ್ಟೇ ಅಲ್ಲದೆ ಉದ್ಯಮಿಗಳು, ರಾಜಕೀಯ ವ್ಯಕ್ತಿಗಳು ತಮ್ಮ ಎದುರಾಳಿಗಳ ಸಿಡಿಆರ್ ಪಡೆದಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಕೆಲವು ಪೊಲೀಸ್ ಅಧಿಕಾರಿಗಳ ಪತ್ನಿಯರು ತಮ್ಮ ಪತಿಯ ಕಾಲ್ ಡಿಟೈಲ್ ಪಡೆದಿದ್ದಾರೆ ಎಂಬ ಮಾಹಿತಿ ಕೂಡ ದೊರೆತಿದೆ.
ಇದನ್ನೂ ಓದಿ: ಮಹಿಳೆಯನ್ನು 30 ಗಂಟೆ ಡಿಜಿಟಲ್ ಅರೆಸ್ಟ್ ಮಾಡಿ, 10.5 ಲಕ್ಷ ದೋಚಿದ ಖದೀಮರು - Digital Arrest