ದೇವನಹಳ್ಳಿ: ವಿದ್ಯಾಭ್ಯಾಸದಲ್ಲಿ ಕಳಪೆ ಸಾಧನೆ ಮಾಡಿದ ಬಿಟಿಕ್ ವಿದ್ಯಾರ್ಥಿ, ಮನೆಗೆ ಹೋದರೆ ಹೆತ್ತವರು ಬೈಯುತ್ತಾರೆ ಎಂದು ಏರ್ಪೋರ್ಟ್ನಲ್ಲಿ ತಾನೊಬ್ಬ ಟೆರರಿಸ್ಟ್ ಎಂದೇಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೊಂದಲದ ವಾತಾವರಣ ಸೃಷ್ಠಿ ಮಾಡಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಲ್ಲಿ ವ್ಯಾಸಂಗ ಮಾಡುತ್ತಿರುವ ಲಕ್ನೋ ಮೂಲದ ವಿದ್ಯಾರ್ಥಿ 'ತಾನು ಉಗ್ರ' ಎಂದು ಹೇಳಿದವ.
ಫೆಬ್ರವರಿ 17 ರ ರಾತ್ರಿ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಏರ್ ಇಂಡಿಯಾದ ನಂ.151731 ವಿಮಾನದಲ್ಲಿ ಬೆಂಗಳೂರಿನಿಂದ ಲಕ್ನೋಗೆ ಪ್ರಯಾಣಿಸಬೇಕಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ, ವಿಮಾನ ಟೆಕ್ ಆಫ್ ಆಗುವ ಮುನ್ನವೇ ಮನಸ್ಸು ಬದಲಾಯಿಸಿ ಆತ ವಿಮಾನದಿಂದ ಹೊರಗೆ ಬಂದಿದ್ದ. ಈ ಬಗ್ಗೆ ಸಿಐಎಸ್ಎಫ್ ಅಧಿಕಾರಿಗಳಿಗೆ ಏರ್ಲೈನ್ ಸಿಬ್ಬಂದಿ ಮಾಹಿತಿ ನೀಡಿದ್ದರು. ಬಳಿಕ CISF ಸಿಬ್ಬಂದಿ ಯುವಕನನ್ನ ಪ್ರಶ್ನೆ ಮಾಡಿದಾಗ, ತಾನು ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದ. ಇದರಿಂದ ಏರ್ಪೋರ್ಟ್ನಲ್ಲಿ ಆತಂಕ ಉಂಟಾಗಿತ್ತು.
ವಿದ್ಯಾರ್ಥಿ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೂರು ದಾಖಲಿಸಿ ಬಂಧಿಸಲಾಗಿತ್ತು. ಅನಂತ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಬಂಧಿತ ವಿದ್ಯಾರ್ಥಿ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ. ವಿದ್ಯಾಭ್ಯಾಸದಲ್ಲಿ ಕಳಪೆ ಸಾಧನೆ ಮಾಡಿದ್ದ, ಈ ಕಾರಣಕ್ಕೆ ಆತನ ಪೋಷಕರು ಮನೆಗೆ ಬರುವಂತೆ ಹೇಳಿದ್ದರು. ಮನೆಗೆ ಹೋದರೆ ಹೆತ್ತವರು ಬೈಯುತ್ತಾರೆ ಎಂದು ಆತ ಹೆದರಿದ್ದ. ಜೊತೆಗೆ ಮನೆಗೆ ಹೋಗಲು ಇಷ್ಟ ಪಡದೆ ತಾನೊಬ್ಬ ಭಯೋತ್ಪಾದಕ ಎಂದು ನಾಟಕವಾಡಿದ್ದಾನೆಂದು CISF ಅಧಿಕಾರಿಗಳು ತಿಳಿಸಿದ್ದಾರೆ.
ಏರ್ಪೋರ್ಟ್ ಸಿಬ್ಬಂದಿ ಮೇಲೆ ಹಲ್ಲೆ: ಕಳೆದ ವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆ ಸಂದರ್ಭ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆಗೈದು, ಪುಂಡಾಟಿಕೆ ಪ್ರದರ್ಶಿಸಿದ್ದ ವಿದೇಶಿ ಪ್ರಜೆಯನ್ನು ಬಿಐಎಎಲ್ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನು ಜಿಂಬಾಬ್ವೆ ಮೂಲದ ರುಕುಡ್ಸೋ ಚಿರಿಕುಮಾರಾರ ಎಂದು ಗುರುತಿಸಲಾಗಿತ್ತು.
ಪ್ರವಾಸಿಗರ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಈತ ದೆಹಲಿಗೆ ಪ್ರಯಾಣಿಸಲು ಏರ್ಪೋರ್ಟ್ಗೆ ಬಂದಿದ್ದ. ಈ ವೇಳೆ ಎಲೆಕ್ಟ್ರಾನಿಕ್ ವಸ್ತುಗಳಿದ್ದ ಬ್ಯಾಗನ್ನು ತಪಾಸಣೆ ಮಾಡುವ ವೇಳೆ ಮಹಿಳಾ ಪ್ರಯಾಣಿಕರ ತಪಾಸಣೆಗಾಗಿ ಇರಿಸಲಾಗಿದ್ದ ಬೂತ್ ಪ್ರವೇಶಿಸಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದ ಸಿಐಎಸ್ಎಫ್ ಸಿಬ್ಬಂದಿ ಬಿಐಎಎಲ್ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ಅಕ್ರಮ ಚಿನ್ನ ಸಾಗಣೆ; ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಬಿದ್ದ ಪ್ರಯಾಣಿಕ