ಮೈಸೂರು: ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಮಳಲಿ ಗ್ರಾಮದ ಬಳಿ ರೈತರ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ಹೆಣ್ಣು ಹುಲಿಯನ್ನು ಸಾಕಾನೆಗಳ ನೆರವಿನಿಂದ ಸೆರೆ ಹಿಡಿಯುವುದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಭಾನುವಾರ ಬೆಳಗ್ಗೆ ಇಲ್ಲಿಗೆ ಸಮೀಪದಲ್ಲೇ ಗಂಡು ಹುಲಿಯೊಂದನ್ನು ಸೆರೆ ಹಿಡಿಯಲಾಗಿತ್ತು.
ಬಳಿಕ ಹೆಣ್ಣು ಹುಲಿಯನ್ನೂ ಅರಣ್ಯ ಇಲಾಖೆಯವರು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಮಳಲಿ ಗ್ರಾಮದ ಕಬಿನಿ ಹಿನ್ನೀರಿನ ಸಮೀಪದ ಡಿಸ್ಕವರಿ ವಿಲೇಜ್ ರೆಸಾರ್ಟ್ ಬಳಿ ಗಂಡು ಹುಲಿಯೊಂದು ಸೆರೆಸಿಕ್ಕಿತ್ತು. ಮಳಲಿ ಗ್ರಾಮದ ಸುಬ್ರಹ್ಮಣ್ಯ ಎಂಬವರ ಜಮೀನಿನಲ್ಲಿ ಇಂದು ಮುಂಜಾನೆ ಹುಲಿಯೊಂದು ಕಾಣಿಸಿಕೊಂಡಿತ್ತು. ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ವೇಳೆ ಹುಲಿ ಕಾಣಿಸಿಕೊಂಡ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿಯ ಗಮನಕ್ಕೆ ತಂದಿದ್ದರು.
ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಹುಲಿಯ ಇರುವಿಕೆಯನ್ನು ಖಚಿತಪಡಿಸಿಕೊಂಡಿದ್ದರು. ಬಳಿಕ ಭೀಮಾ ಮತ್ತು ಮಹೇಂದ್ರ ಎಂಬ ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಚರಣೆ ನಡೆಸಿ, ಹುಲಿಗೆ ಅರಿವಳಿಕೆ ಚುಚ್ಚು ಮದ್ದನ್ನು ನೀಡಿ ಸೆರೆಹಿಡಿದ್ದಾರೆ.
ಕಾರ್ಯಾಚರಣೆ ವೇಳೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ರಂಗಸ್ವಾಮಿ, ವಲಯ ಅರಣ್ಯಾಧಿಕಾರಿಗಳಾದ ಹರ್ಷಿತ್ ಕುಮಾರ್, ಭರತ್ ತಳವಾರ್, ಮಧು ಹಾಗೂ ಪಶುವೈದ್ಯ ರಮೇಶ್ ಮುಂತಾದವರು ಇದ್ದರು.
ಇದನ್ನೂ ಓದಿ: ಮೈಸೂರು: ಕಬಿನಿ ಹಿನ್ನೀರಿನ ರೆಸಾರ್ಟ್ ಪಕ್ಕದಲ್ಲಿ ಹುಲಿ ಸೆರೆ - Tiger Rescued