ಮಂಡ್ಯ: ಜಿಲ್ಲೆಯಲ್ಲಿ ಮತ್ತೆ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ನಾಗಮಂಗಲ ತಾಲೂಕಿನ ಮಾವಿನಕೆರೆ ಗ್ರಾಮದ ತೋಟದ ಮನೆಯಲ್ಲಿ ಹೆಣ್ಣು ಭ್ರೂಣ ಪತ್ತೆ, ಹತ್ಯೆ ದಂಧೆ ಬೆಳಕಿಗೆ ಬಂದಿದೆ. ಭ್ರೂಣಲಿಂಗ ಪತ್ತೆ ಮಾಡುತ್ತಿದ್ದಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರಿಂದ ಆರೋಪಿಗಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮನೋಹರ್, ಧನಂಜಯ್, ನಾಗಮಣಿ ಬಂಧಿತರು.
ಕಾರ್ಯಾಚರಣೆ ನಡೆದಿದ್ದೇಗೆ?: ಮಾವಿನಕೆರೆ ಗ್ರಾಮದ ಧನಂಜಯ್ ಎಂಬವರಿಗೆ ಸೇರಿದ ತೋಟದ ಮನೆಯಲ್ಲಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ದಂಧೆ ನಡೆಯುತ್ತಿರುವ ಬಗ್ಗೆ ಡಿಎಚ್‌ಒ ಡಾ.ಮೋಹನ್‌ಗೆ ಎರಡು ತಿಂಗಳ ಹಿಂದೆ ಮಾಹಿತಿ ಬಂದಿತ್ತು. ಹೀಗಾಗಿ ರೆಡ್ ಹ್ಯಾಂಡ್ ಆಗಿ ಹಿಡಿಯಬೇಕೆಂದು ಯೋಜನೆ ರೂಪಿಸಲಾಗಿತ್ತು. ಅದರಂತೆ, ಡಿಎಚ್‌ಒ ಡಾ.ಮೋಹನ್, ಗರ್ಭಿಣಿಯೊಬ್ಬರನ್ನು ಈ ಗ್ಯಾಂಗ್‌ಗೆ ಸಂಪರ್ಕಿಸಿದ್ದರು. ಬಳಿಕ ಗರ್ಭಿಣಿ ಮಹಿಳೆ ಮಗು ಪತ್ತೆಗೆ ಸ್ಕ್ಯಾನ್ ಮಾಡಿಸಿಕೊಳ್ಳಬೇಕು ಎಂದು ಗ್ಯಾಂಗ್‌ಗೆ ತಿಳಿಸಿದ್ದಳು.
ಈ ಹಿನ್ನೆಲೆಯಲ್ಲಿ ಗರ್ಭಿಣಿಯನ್ನು ಸ್ಕ್ಯಾನ್ ಮಾಡಲು ನಿನ್ನೆ(ಗುರುವಾರ) ರಾತ್ರಿ ನಾಗಮಂಗಲ ಮಾವಿನಕೆರೆ ಗ್ರಾಮದ ತೋಟದ ಮನೆಗೆ ಕರೆದುಕೊಂಡು ಹೋಗಿ ಸ್ಕ್ಯಾನ್ ಮಾಡಲಾಗಿತ್ತು. ಬಳಿಕ ಸ್ಕ್ಯಾನ್ ಮಾಡಿದ ಅಭಿಷೇಕ್ ಎಂಬ ವ್ಯಕ್ತಿ ಅಲ್ಲಿಂದ ಸ್ಕ್ಯಾನಿಂಗ್ ಮಿಷನ್ ತೆಗೆದುಕೊಂಡು ಹೋಗಿರುತ್ತಾನೆ. ಬಳಿಕ ಡಿಹೆಚ್ಒ ಡಾ.ಮೋಹನ್ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಹಾಸನ ಮೂಲದ ಗರ್ಭಿಣಿ, ಆಕೆಯ ಗಂಡ ಮನೋಹರ್, ತೋಟದ ಮನೆಯ ಮಾಲೀಕ ಧನಂಜಯ್, ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರೆ ನಾಗಮಣಿ ಅಬಾರ್ಷನ್ ಕಿಟ್‌ಸಹಿತ ಸಿಕ್ಕಿಬಿದ್ದಿದ್ದಾರೆ.