ರಾಯಚೂರು: ಇಲ್ಲಿಯ ಕೃಷ್ಣಾ ನದಿಯ ಸೇತುವೆ ಕಾಮಗಾರಿ ಸಂದರ್ಭದಲ್ಲಿ ಪುರಾತನ ಕಾಲದ ಶಿವಲಿಂಗ ಮತ್ತು ವಿಷ್ಣುವಿನ ಮೂರ್ತಿ ದೊರೆತಿದೆ. ದೇವಸೂಗೂರು ಗ್ರಾಮದ ಸಮೀಪ ಹರಿಯುವ ನದಿಗೆ ಅಡ್ಡಲಾಗಿ ಹೊಸದಾಗಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಮೂರ್ತಿಗಳು ಕಂಡುಬಂದಿವೆ.
ಪ್ರಭಾವಳಿಯ ಹೊದಿಕೆಯ ಜೊತೆಗೆ ವಿಷ್ಣುವಿನ ದಶಾವತಾರದ ಕೆತ್ತನೆಗಳು ಮೂರ್ತಿಯ ಮೇಲೆ ಕಂಡು ಬಂದಿವೆ. ಈ ವಿಗ್ರಹ ವಿಶೇಷವಾದ ಪತ್ರಿಮೆ ಒಳಗೊಂಡಿದೆ. ಪೀಠದ ಮೇಲೆ ವಿಗ್ರಹವಿದೆ. ವಿಷ್ಣುವಿನ ಕೂರ್ಮ, ವರಾಹ, ನರಸಿಂಹ, ವಾಮನ, ರಾಮ, ಕೃಷ್ಣ ಸೇರಿದಂತೆ ಹತ್ತು ಅವತಾರದಲ್ಲಿ ಮೂರ್ತಿ ಸಮಭಂಗಿಯಲ್ಲಿದೆ. ನಾಲ್ಕು ಕೈಗಳನ್ನು ಹೊಂದಿರುವಂತಹ ವಿಷ್ಣುವಿನ ಮೇಲ್ಭಾಗದಲ್ಲಿ ಶಂಖ ಹಾಗೂ ಚಕ್ರವಿದೆ. ಕೆಳಭಾಗದಲ್ಲಿ ಒಂದು ಕಲ್ಕಿ ಹಸ್ತ ಹಾಗೂ ವರದ ಹಸ್ತವನ್ನು ನೋಡಬಹುದು.
ಇದರ ಲಕ್ಷಣಗಳು ವೆಂಕಟೇಶ್ವರನ ಮೂರ್ತಿಯನ್ನು ಹೋಲುತ್ತವೆ ಎಂದು ಆಗಮ ಹೇಳುತ್ತದೆ. ಅಕ್ಕಪಕ್ಕದಲ್ಲಿ ವಿಷ್ಣುವಿನ ವಾಹನ ಗರುಡನ್ನು ತೋರಿಸಬೇಕಾಗಿತ್ತು. ಆದರೆ ಗರುಡ ಇಲ್ಲಿ ಕಾಣುತ್ತಿಲ್ಲ. ಅಲ್ಲದೇ ವಿಷ್ಣು ಅಲಂಕಾರಪ್ರಿಯ ಎನ್ನುವ ರೀತಿಯಲ್ಲಿದೆ. ನಿಂತ ಮಂದಸ್ಮಿತ, ಗರ್ಭಗ್ರಹದ ಮೂಲಬೇರು ಧೃವಬೇರು ಎಂದು ಕರೆಯಲಾಗುತ್ತದೆ. ಮೂರ್ತಿಯ ಮೂಗಿನ ಬಳಿ ಕೆಲವೊಂದು ಭಗ್ನತೆ ಕಂಡು ಬಂದಿದೆ. ಇದರ ಹೊರತಾಗಿ ಭಗ್ನವಾದ ಮೂರ್ತಿಯಲ್ಲ. ಯಾವುದೋ ದಾಳಿಗೆ ತುತ್ತಾಗಿ ಅದನ್ನು ನೀರಿಗೆ ಬಿಡುವ ಪ್ರಸಂಗ ಬಂದಿರಬಹುದು ಎಂದು ರಾಯಚೂರು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಉಪನ್ಯಾಸಕಿ ಡಾ.ಪದ್ಮಜಾ ದೇಸಾಯಿ ಹೇಳಿದ್ದಾರೆ.
ಈಗ ಸಿಕ್ಕಿರುವ ವಿಷ್ಣುವಿನ ಮೂರ್ತಿ ಹಾಗೂ ಶಿವಲಿಂಗ ನದಿಯ ಬಳಿ ಇರುವ ಶ್ರೀರಾಮಲಿಂಗೇಶ್ವರ ದೇವಾಲಯದ ಬಳಿ ಇರಿಸಲಾಗಿದೆ. ನದಿಯಲ್ಲಿ ಮೂರ್ತಿಗಳು ಸಿಕ್ಕಿರುವ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ತಾರಾ ಪರ್ವತದಲ್ಲಿ ಅಪ್ರಕಟಿತ ಶಾಸನ, ಭಗ್ನ ರೂಪದ ಶಿಲಾ ಮೂರ್ತಿ ಪತ್ತೆ