ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅಭ್ಯರ್ಥಿಗಳ ಆಯ್ಕೆ ಪೈಪೋಟಿ ಬಹಳಷ್ಟು ಜೋರಾಗಿ ನಡೆಯುತ್ತಿದೆ. ಕ್ಷೇತ್ರಕ್ಕೆ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಸದ್ಯ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಡಾ.ಕೆ. ಸುಧಾಕರ್ ಸ್ಪರ್ಧಿಸಲಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದೆ. ಇದರ ನಡುವೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾಜಿ ಸಚಿವರಿಗೆ ಏಕವಚನದಲ್ಲೇ ಟಾಂಗ್ ಕೊಟ್ಟು ಮತ್ತೆ ಸುದ್ದಿಯಾಗಿದ್ದಾರೆ.
''ಹೇ ಸುಧಾಕರ್ ಹೀನಾಯವಾಗಿ ಸೋಲುತ್ತಿಯಾ'' ಎಂದು ಶಾಸಕ ಪ್ರದೀಪ್ ಈಶ್ವರ್ ಏಕವಚನದಲ್ಲೇ ಹೇಳಿಕೆ ಕೊಟ್ಟಿದ್ದು, ಕ್ಷೇತ್ರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ''ಮಾಜಿ ಸಚಿವ ಸುಧಾಕರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಮುಂದಾಗುತ್ತಿದ್ದಾರೆ. ಆದರೆ, ಬಿಜೆಪಿ ಪಕ್ಷದಲ್ಲಿ ಉಳಿದುಕೊಂಡರೇ ಮುಂದಿನ ಚುನಾವಣೆಯಲ್ಲಿ ಆದರೂ ಬೇರೆ ಎಲ್ಲೋ ಅಭ್ಯರ್ಥಿಯಾಗಿ ನಿಲ್ಲಬಹುದು. ಒಂದು ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಬಂದರೆ ಜನ ನಿಮ್ಮನ್ನು ಹೀನಾಯವಾಗಿ ಸೋಲಿಸುತ್ತಾರೆ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಮಾಜಿ ಸಚಿವ ಸುಧಾಕರ್ ಹೇಳಿಕೆ ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್ ಅವರು, ''ನನ್ನ ಹಿಂದೆ ಇರುವವರಾ ಅಥವಾ ಅವರ ಹಿಂದೆ ಇರುವವರಾ ಎಂದು ಅವಲೋಕನ ಮಾಡಿಕೊಳ್ಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಾರು ಸೋತಿದ್ದಾರೆ ತಿಳಿದುಕೊಳ್ಳಬೇಕು'' ಎಂದು ಟಾಂಗ್ ಕೂಡಾ ಕೊಟ್ಟಿದ್ದಾರೆ.
''ಕಳೆದ 15 ವರ್ಷಗಳಿಂದ ಚಿಕ್ಕಬಳ್ಳಾಪುರದಲ್ಲಿ 10 ಸಾವಿರ ಮಕ್ಕಳಿಗೆ ಪಾಠ ಮಾಡಿದ್ದೇನೆ. ಲೈಪ್ ಇಸ್ ಬ್ಯೂಟಿಫುಲ್ ಎಂಬ ಕಾರ್ಯಕ್ರಮ ಮಾಡಿದ್ದೇನೆ. ಮಕ್ಕಳಿಗೆ ಬಟ್ಟೆ ಕೊಡಿಸಿದ್ದೇನೆ. ಸೀರೆಗಳನ್ನು ವಿತರಿಸಿದ್ದೇನೆ. ಬಡಮಕ್ಕಳಿಗೆ ಶಿಷ್ಯವೇತನ ಕೊಡಿಸಿದ್ದೇನೆ. ಆಂಬ್ಯುಲೆನ್ಸ್ ವಿತರಣೆ, ತಂದೆ- ತಾಯಿ ಇಲ್ಲದ ಮಕ್ಕಳಿಗೆ 50 ಲಕ್ಷ ಡಿಪಾಸಿಟ್ ಮಾಡಿದ್ದೇನೆ. ನಾನು ಏನು ಮಾಡಿದ್ದೇನೆ ಎಂಬುವುದನ್ನು ಚಿಕ್ಕಬಳ್ಳಾಪುರ ಹಾಗೂ ಪೆರೆಸಂದ್ರ ಜನತೆಗೆ ಗೊತ್ತು'' ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ಸಂವಿಧಾನ ಬದಲಾವಣೆ ಕುರಿತು ಅನಂತ ಕುಮಾರ್ ಹೆಗ್ಡೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿ, ''ಅನಂತ ಕುಮಾರ್ ಹೆಗ್ಡೆಯವರ ಅಪ್ಪ, ತಾತ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ, ಯದುವೀರ್ರಿಗೆ ಕೊಟ್ಟರೂ ಸ್ವಾಗತ: ಸಂಸದ ಪ್ರತಾಪ್ ಸಿಂಹ