ಬೆಂಗಳೂರು: ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವವರನ್ನು ಮತ್ತು ಅದರ ಹಿಂದಿರುವವರನ್ನು ಕಾಂಗ್ರೆಸ್ ಪೋಷಿಸುತ್ತಿದೆ. ಇದು ದೇಶಕ್ಕೆ ಮತ್ತು ರಾಜ್ಯದ ಸುರಕ್ಷತೆಗೆ ದೊಡ್ಡ ಬೆದರಿಕೆಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮೂರು ದಿನ ಬಾಕಿ ಉಳಿದಿರುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರವಾಗಿ ಮಂಗಳವಾರ ಬೃಹತ್ ರೋಡ್ ಶೋ ನಡೆಸಿದರು. ಬೊಮ್ಮನಹಳ್ಳಿಯ ವಿವೇಕಾನಂದ ಸರ್ಕಲ್ನಿಂದ ಪ್ರಾರಂಭವಾಗಿ ಐಐಎಂಬಿ( IIMB)- ಬನ್ನೇರುಘಟ್ಟ ವರೆಗೆ ರೋಡ್ ಶೋ ಸಾಗಿತು. ಮಾರ್ಗದ ಉದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ನಾಗರಿಕರು, ಸಂಭ್ರಮೋಲ್ಲಾಸದಿಂದ ಹೂ ಮಳೆ ಸುರಿದ ಅಮಿತ್ ಶಾ ಅವರನ್ನು ಸ್ವಾಗತಿಸಿದರು. ಜೈ ಶ್ರೀರಾಂ, ಜೈ ಮೋದಿ, ಜೈ ಅಮಿತ್ ಶಾ ಘೋಷಣೆಗಳು ಮಾರ್ಗದ ಉದ್ದಕ್ಕೂ ಮೊಳಗಿದವು.
ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, “ಕರ್ನಾಟಕದಲ್ಲಿ ಲೂಟಿಕೋರ, ಓಲೈಕೆಯ, ಸ್ವಜನಪಕ್ಷಪಾತದ ಕಾಂಗ್ರೆಸ್ ಸರ್ಕಾರದಿಂದ ಜನರು ರೋಸಿ ಹೋಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿ ಸಮಾಜಘಾತುಕ ಶಕ್ತಿಗಳ, ಮತೀಯವಾದಿಗಳ ಮೆರೆದಾಟ ಹೆಚ್ಚಾಗಿದೆ. ಶಾಂತಿಗೆ ಹೆಸರಾದ ನಾಡಿನಲ್ಲಿ ಕೊಲೆ, ರಕ್ತಪಾತ, ಭಯೋತ್ಪಾದಕ ಚಟುವಟಿಕೆಗಳೂ ಹೆಚ್ಚಾಗುತ್ತಿವೆ. ಕಾಂಗ್ರೆಸ್ಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಎಸ್‌ಡಿಪಿಐ ಬೆಂಬಲವಿದೆ. ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವವರನ್ನು ಅದರ ಹಿಂದಿರುವವರನ್ನು ಕಾಂಗ್ರೆಸ್ ಪೋಷಿಸುತ್ತಿದೆ. ಇದು ದೇಶಕ್ಕೆ ಮತ್ತು ರಾಜ್ಯದ ಸುರಕ್ಷತೆಗೆ ದೊಡ್ಡ ಬೆದರಿಕೆಯಾಗಿದೆ“ ಎಂದು ವಾಗ್ದಾಳಿ ನಡೆಸಿದರು.
“ಇತ್ತೀಚೆಗೆ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ನಡೆದ ಸ್ಫೋಟವು ನಗರವನ್ನು ಬೆಚ್ಚಿ ಬೀಳಿಸಿತ್ತು. ಈ ಕೃತ್ಯದ ಹಿಂದಿನ ಜಾಲವನ್ನು ಭೇದಿಸಿರುವ ಎನ್‌ಐಎ, ಸ್ಫೋಟಕ್ಕೆ ಕಾರಣರಾದವರನ್ನು ಬಂಧಿಸಿದೆ. ಬೆಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪಿಸಿದ್ದರಿಂದ ಇಂತಹ ಕೃತ್ಯಗಳನ್ನು ನಿಗ್ರಹಿಸಲು ಸಾಧ್ಯವಾಗಿದೆ. ತೇಜಸ್ವಿ ಸೂರ್ಯ ಎನ್‌ಐಎ ಕಚೇರಿ ಸ್ಥಾಪನೆಗೆ ಮನವಿ ಮಾಡಿದ್ದರು” ಎಂದು ಸ್ಮರಿಸಿದರು.
“ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಪ್ರಗತಿ ಪಥದತ್ತ ಸಾಗಿದ್ದು, ಅವರ ಕೈ ಬಲಪಡಿಸಿದರೆ ದೇಶ ಸುಭದ್ರವಾಗಿರುತ್ತದೆ. ಭಯೋತ್ಪಾದನೆ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿರುವ ಸರ್ಕಾರ, ದೇಶದ ಹೊರಗೂ ನುಗ್ಗಿ ಭಯೋತ್ಪಾದಕರನ್ನು ನಿರ್ನಾಮ ಮಾಡುವ ಸಾಹಸ ತೋರಿದೆ. ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ಗಳಿಂದ ಭಯೋತ್ಪಾದಕ ಗುಂಪುಗಳು ಮತ್ತು ಶತ್ರು ರಾಷ್ಟ್ರಗಳು ಹೆದರಿವೆ. ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದ ದೇಶದಲ್ಲಿ ನಕ್ಸಲೀಯ ಚಟುವಟಿಕೆಗಳಲ್ಲೂ ಶೇ.75 ರಷ್ಟು ಕಡಿಮೆಯಾಗಿದ್ದು, ಈ ಹಾವಳಿಯ ಸಂಪೂರ್ಣ ನಿಗ್ರಹ ದೂರವಿಲ್ಲ“ ಎಂದರು.
“ಕಾಂಗ್ರೆಸ್ನ ಗ್ಯಾರಂಟಿಗಳ ಪರಿಣಾಮ ಏನು ಎಂಬುದು ಜನರಿಗೆ ಗೊತ್ತಾಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಮತದಾರರು ತಿರಸ್ಕರಿಸಿ, ಮೋದಿ ಅವರ ಶಾಶ್ವತ ಗ್ಯಾರಂಟಿಗಳನ್ನು ಪುರಸ್ಕರಿಸಲಿದ್ದಾರೆ. ಕಳೆದ ಐದು ವರ್ಷಗಳಿಂದ ಬೆಂಗಳೂರು ದಕ್ಷಿಣದಲ್ಲಿ ಉತ್ತಮ ಕೆಲಸ ಮಾಡಿರುವ ತೇಜಸ್ವಿ ಸೂರ್ಯ ಅವರನ್ನು ಮತ್ತೊಮ್ಮೆ ಆಶೀರ್ವದಿಸುವಂತೆ ಮನವಿ ಮಾಡಿದ ಅಮಿತ್ ಶಾ, ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳನ್ನು ಎನ್‌ಡಿಎ ಮೈತ್ರಿಕೂಟ ಗೆಲ್ಲಲಿದೆ.” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ತೇಜಸ್ವಿ ಸೂರ್ಯ, “ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಬೆಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪಿಸಬೇಕು ಎಂಬ ನನ್ನ ಮನವಿಯನ್ನು ಗೃಹಸಚಿವರು ಪುರಸ್ಕರಿಸಿದ್ದಕ್ಕೆ ಅವರಿಗೆ ಧನ್ಯವಾದ. ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಅನೇಕ ಜನಪರ ಕಾರ್ಯಗಳು ಯಶಸ್ವಿಯಾಗಿ ಜಾರಿಗೊಂಡಿವೆ. ರಸ್ತೆ, ಮೆಟ್ರೋ ಸೇರಿದಂತೆ ಮೂಲ ಸೌಕರ್ಯ ಯೋಜನೆಗಳು ಭರದಿಂದ ಸಾಗಿವೆ. ಕೆಲವೇ ತಿಂಗಳಲ್ಲಿ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದ್ದು, ದಕ್ಷಿಣ ಭಾಗದ ನಾಗರಿಕರಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ. ಮೆಟ್ರೋ ವಿಸ್ತರಣೆ, ಸಬರ್ಬನ್ ರೈಲು, ಉಪನಗರ ಹೊರ ವರ್ತುಲ ರಸ್ತೆಯಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗಲಿದೆ“ ಎಂದರು.
“ಬೆಂಗಳೂರು ದಕ್ಷಿಣದ ನಾಗರಿಕರಿಗೆ ನನ್ನ 5 ವರ್ಷಗಳ ರಿಪೋರ್ಟ್ ಕಾರ್ಡ್ ಮುಂದಿಟ್ಟಿದ್ದು, ನರೇಂದ್ರ ಮೋದಿ ಅವರ ಕಾರ್ಯಗಳ ಆಧಾರದಲ್ಲಿ ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ ಬಿಜೆಪಿಯು ಮತ್ತೊಮ್ಮೆ ಅಭೂತಪೂರ್ವ ವಿಜಯ ಸಾಧಿಸಲಿದೆ " ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಆರ್ ಅಶೋಕ್, ಶಾಸಕರಾದ ಸಿ ಕೆ ರಾಮಮೂರ್ತಿ, ಸತೀಶ್ ರೆಡ್ಡಿ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.