ಬೆಂಗಳೂರು: 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಬೇಕು, ಇದಕ್ಕಾಗಿ ಭದ್ರ ಬುನಾದಿ ಹಾಕಬೇಕು ಎನ್ನುವ ದೃಷ್ಟಿಯಿಂದ ಸಂಕಲ್ಪ ಪತ್ರದಲ್ಲಿ ವಿಕಸಿತ ಭಾರತ ಪರಿಕಲ್ಪನೆ ಸಾಕಾರಕ್ಕೆ ಮುಂದಿನ ಐದು ವರ್ಷಗಳಲ್ಲಿ ಹಲವು ಅಂಶಗಳಿಗೆ ಒತ್ತುಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಆಟೋಮೊಬೈಲ್ ಹಬ್: ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರ 133ನೇ ಜನ್ಮದಿನ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಮೋದಿಯವರ ಸಂಕಲ್ಪ 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ದೇಶ ಆಗಬೇಕು. ಇದಕ್ಕಾಗಿ ಭದ್ರ ಬುನಾದಿ ಹಾಕಬೇಕು.
ಸಂಕಲ್ಪ ಪತ್ರದಲ್ಲಿ ಇದಕ್ಕಾಗಿ ಮುಂದಿನ ಐದು ವರ್ಷಗಳಲ್ಲಿ ಹಲವು ಅಂಶಗಳಿಗೆ ಒತ್ತುಕೊಟ್ಟಿದ್ದಾರೆ. ಭಾರತ ಆಟೋಮೊಬೈಲ್ ಹಬ್ ಆಗಬೇಕು, ಆಹಾರ ಸಂಸ್ಕರಣೆ, ಎಲೆಕ್ಟ್ರಾನಿಕ್, ಫಾರ್ಮಾಸ್ಯೂಟಿಕಲ್ ಹೀಗೆ ಎಲ್ಲ ರಂಗಗಳಲ್ಲೂ ಭಾರತ ಆತ್ಮ ನಿರ್ಭರತೆ ಸಾಧಿಸಬೇಕು ಅಂತ ಹೇಳಿದ್ದಾರೆ. ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿದ್ದಾರೆ ಎಂದರು.
ಅಂಬೇಡ್ಕರ್ ಅವರ ಕನಸಿನಂತೆ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ತಲುಪುವ ಕೆಲಸ ಬಿಜೆಪಿ ಸಂಕಲ್ಪ ಪತ್ರದಲ್ಲಿ ಆಗಿದೆ. ಎಲ್ಲ ಕ್ಷೇತ್ರದಲ್ಲೂ ಒತ್ತು ಕೊಡುವ ಕೆಲಸ ಆಗಿದೆ. ಪ್ರಪಂಚದಾದ್ಯಂತ ರಾಮಾಯಣ ಹಬ್ಬ ಆಚರಣೆ ಮಾಡುವ ಅಭಿಲಾಷೆ ಮೋದಿಯವರದ್ದಾಗಿದೆ ಎಂದರು.
ಕಾಂಗ್ರೆಸ್ ನ ಪ್ರಣಾಳಿಕೆಯಲ್ಲಿ ಪೊಳ್ಳು ಭರವಸೆಗಳನ್ನು ನೀಡಲಾಗಿದೆ, ಕಾಂಗ್ರೆಸ್ ಅನ್ನು ದೇಶದ ಜನ ಮರೆತು ಹೋಗಿದ್ದಾರೆ. ಇಡೀ ದೇಶದಲ್ಲಿ 40-50 ಸ್ಥಾನ ಸಹ ಕಾಂಗ್ರೆಸ್ ಗೆ ಬರಲ್ಲ ಎಂದು ಟೀಕಿಸಿದರು.
ನಾರಿ ಶಕ್ತಿ , ಯುವ ಶಕ್ತಿ, ಬಡವ ರೈತರ ಬಗ್ಗೆ ಪ್ರಸ್ತಾಪ: ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಮಾತನಾಡಿ, ಇಂದು ಬಿಜೆಪಿಯಿಂದ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಲಾಗಿದೆ, ವಿಕಸಿತ ಭಾರತ, ಆತ್ಮ ನಿರ್ಭರ ಭಾರತ, ವಿಶ್ವಗುರು ನಮ್ಮ ಸಂಕಲ್ಪ. ಈ ಸಂಕಲ್ಪ ಪತ್ರದಲ್ಲಿ ವಿಶೇಷವಾಗಿ ನಾರಿಶಕ್ತಿ, ಯುವ ಶಕ್ತಿ, ಬಡವರು ಮತ್ತು ರೈತರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ನಾಲ್ಕೂ ಸಮುದಾಯ ಸಮಾಜ ಕಟ್ಟುವ ಜಾತಿಗಳೇ ಹೊರತು ಸಮಾಜ ಒಡೆಯುವ ಜಾತಿಗಳಲ್ಲ. ಆದರೆ ಕಾಂಗ್ರೆಸ್ ಪ್ರಸ್ತಾಪಿಸುವ ಜಾತಿಗಳು ಸಮಾಜ ಒಡೆಯುವ ಜಾತಿಗಳು, ನಾವು ಪ್ರಸ್ತಾಪ ಮಾಡುವ ಜಾತಿಗಳು ಸಮಾಜ ಕಟ್ಟುವ ಜಾತಿಗಳು ಇಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ್ ಅನ್ನೋ ಭೇದಭಾವ ಇಲ್ಲ, ಆ ಜಾತಿ ಈ ಜಾತಿ ಎಂಬ ಭಿನ್ನತೆ ಇಲ್ಲ ಎಂದರು.
ಎಲ್ಲ ಜಾತಿಗಳಲ್ಲೂ ಬಡವರು, ರೈತರು ಯುವಕರು, ಮಹಿಳೆಯರಿದ್ದಾರೆ ಅವರ ಅಭಿವೃದ್ಧಿಯೇ ನಮ್ಮ ಸಂಕಲ್ಪ ಪತ್ರದ ಉದ್ದೇಶ. ಬದುಕಿನ ಘನತೆ, ಗುಣಮಟ್ಟದ ಬಗ್ಗೆ ಸಂಕಲ್ಪ ಪತ್ರದಲ್ಲಿ ಹೇಳಲಾಗಿದೆ. ಇದರ ಜತೆಗೆ ವಿಫುಲ ಅವಕಾಶದ ಬಗ್ಗೆಯೂ ಹೇಳಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿ, ಉತ್ತರ ದಕ್ಷಿಣ ಪೂರ್ವ ಪಶ್ಚಿಮಕ್ಕೆ ವಂದೇ ಭಾರತ್ ಟ್ರೈನ್, ಬುಲೆಟ್ ಟ್ರೈನ್, ವಿಮಾನ ನಿಲ್ದಾಣಗಳು, ಆಸ್ಪತ್ರೆ, ಐಟಿ, ಆಟೋಮೊಬೈಲ್ ಕೈಗಾರಿಕೆ ತೆರೆಯುವ ಬಗ್ಗೆ ಮಾತಾಡಿದ್ದಾರೆ ಎಂದು ತಿಳಿಸಿದರು.
2047 ರಲ್ಲಿ ಭಾರತ ಜಗತ್ತಿನ ದೊಡ್ಡ ಆರ್ಥಿಕ ಶಕ್ತಿ: ನಮ್ಮ ಸಂಕಲ್ಪ ಪತ್ರದ ಉದ್ದೇಶ 2047 ರಲ್ಲಿ ಭಾರತ ಜಗತ್ತಿನ ದೊಡ್ಡ ಆರ್ಥಿಕ ಶಕ್ತಿ ಆಗಬೇಕು. ಭಾರತ ಬಡತನ ಮುಕ್ತ ಆಗಬೇಕು, ಅಸ್ಪೃಶ್ಯತೆ, ಜಾತೀಯತೆಯಿಂದ ಮುಕ್ತವಾಗಬೇಕು ಅನ್ನೋದು ಈ ಸಂಕಲ್ಪ ಪತ್ರದಲ್ಲಿದೆ. ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೇ ಸಂಕಲ್ಪ ಪತ್ರದ ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು.ಮಾಜಿ ಗೃಹ ಆರಗ ಜ್ಞಾನೇಂದ್ರ,ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.
ಬಿಜೆಪಿ ಪ್ರಣಾಳಿಕೆ ವಿಕಸಿತ ಭಾರತ ಸಂಕಲ್ಪದ ಮಾರ್ಗದರ್ಶಿ: ಪ್ರಹ್ಲಾದ್ ಜೋಶಿ
ಅಶಕ್ತರ ಸಬಲೀಕರಣ, ಮಹಿಳೆಯರ ಪ್ರಗತಿ ಸೇರಿದಂತೆ ಅನೇಕ ವಿಷಯಗಳ ಕುರಿತು ಪ್ರಣಾಳಿಕೆಯಲ್ಲಿ ವಿವರಿಸಿದ್ದು, ವಿಕಸಿತ ಭಾರತ ಸಂಕಲ್ಪದ ಮಾರ್ಗದರ್ಶಿ ಪ್ರಣಾಳಿಕೆಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಡಾ.ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಹಿಳೆಯರ, ರೈತರ ಸಶಕ್ತೀಕರಣ, ಬಡತನ ನಿರ್ಮೂಲನೆ ಸೇರಿದಂತೆ ಅನೇಕ ವಿಷಯಗಳ ಕುರಿತು ಪ್ರಣಾಳಿಕೆಯಲ್ಲಿ ವಿವರಿಸಲಾಗಿದೆ. ಸಣ್ಣ ಕೈಗಾರಿಕೆಗಳಿಗೂ ವಿಶೇಷ ಒತ್ತು ನೀಡಲಾಗಿದೆ. ದೇಶದ ಅರ್ಥ ವ್ಯವಸ್ಥೆ ಹಾಗೂ ಆಡಳಿತದಲ್ಲಿ ಪರಿವರ್ತನೆ ತರುವ ನಿಟ್ಟಿನಲ್ಲಿ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ' ಎಂದು ಹೇಳಿದರು.
ಡಾ. ಬಿ ಆರ್ ಅಂಬೇಡ್ಕರ್ ಶತಮಾನ ಕಂಡ ಮಹಾನ್ ಪುರುಷ. ಸೂರ್ಯ-ಚಂದ್ರ ಇರುವವರೆಗೂ ಅವರನ್ನು ದೇಶ ಸ್ಮರಿಸುತ್ತದೆ. ಸಾಕಷ್ಟು ಕರಾಳ ನೋವು ಅನುಭವಿಸಿದ್ದರೂ, ಅವರು ಸಂವಿಧಾನ ರಚನೆ ಸಂದರ್ಭ ದ್ವೇಷ ರಹಿತವಾಗಿ ಕೆಲಸ ಮಾಡಿದ್ದಾರೆ. ಎಲ್ಲ ಸಮಾಜದವರಿಗೂ ಸಮಾನತೆಯ ಹಕ್ಕನ್ನು ನೀಡಿರುವ ಮಹಾನ್ ಪುಣ್ಯಾತ್ಮ. ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ಭಾವ ಇರದ ಸುಂದರ ಸಮಾಜ ಹಾಗೂ ವಿಕಸಿತ ಭಾರತ ನಿರ್ಮಿಸುವ ಮೂಲಕ ನಾವು ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದು ತಿಳಿಸಿದರು.