ಬೆಂಗಳೂರು: ಅಂಬರೀಶ್ ಅಭಿಮಾನಿಗಳ ಸಂಘದ ಅಭಿಪ್ರಾಯ ಸುಮಲತಾ ಅವರು ಚುನಾವಣೆಗೆ ನಿಲ್ಲಬೇಕು ಎನ್ನುವುದೇ ಆಗಿದೆ. ಏಪ್ರಿಲ್ 3 ರಂದು ಸೂಕ್ತ ನಿರ್ಧಾರವನ್ನೇ ಸುಮಲತಾ ಪ್ರಕಟಿಸಲಿದ್ದಾರೆ ಎಂದು ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ತಿಳಿಸಿದ್ದಾರೆ.
ಸುಮಲತಾ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 3 ರಂದು ಮಂಡ್ಯದಲ್ಲಿ ಅಭಿಮಾನಿಗಳ ಸಭೆಗೆ ಎರಡು ಕಡೆ ಸ್ಥಳ ಗುರುತಿಸಲಾಗಿದೆ. ಯಾವ ಸ್ಥಳದಲ್ಲಿ ಸಭೆಗೆ ಅನುಮತಿ ಸಿಗಲಿದೆಯೋ ಅಲ್ಲಿ ಸಭೆ ನಡೆಸಲಾಗುತ್ತದೆ. ಅಂದು ಬೆಳಗ್ಗೆ 11 ಗಂಟೆಗೆ ಸಭೆ ನಡೆಸಿ ಅಭಿಪ್ರಾಯ ಆಲಿಸಲಿದ್ದಾರೆ ನಂತರ ನಿರ್ಧಾರ ಪ್ರಕಟಿಸಲಿದ್ದಾರೆ. ಸುಮಲತಾ ಸ್ವಚ್ಛ ರಾಜಕಾರಣಿಯಾಗಿದ್ದಾರೆ ಅವರೇ ಚುನಾವಣೆಗೆ ನಿಲ್ಲಬೇಕು ಎನ್ನುವುದೇ ಎಲ್ಲರ ಅಪೇಕ್ಷೆ ಎಂದರು.
ಏ.3ರಂದು ರಾಜಕೀಯ ನಿರ್ಧಾರ ಪ್ರಕಟ - ಸುಮಲತಾ ಅಂಬರೀಶ್: ಮತ್ತೊಂದೆಡೆ, ಬಿಜೆಪಿಯಂತೆ ಕಾಂಗ್ರೆಸ್ನಿಂದಲೂ ಪಕ್ಷ ಸೇರ್ಪಡೆಗೆ ಆಹ್ವಾನ ಬಂದಿರುವುದು ಸತ್ಯ. ಆದರೆ ನನ್ನ ನಿರ್ಧಾರ ಆ ಪಕ್ಷಕ್ಕೋ, ಈ ಪಕ್ಷಕ್ಕೋ ಅಂತ ನೋಡಿಕೊಂಡು ಮಾಡಲ್ಲ. ಮಂಡ್ಯದ ಜನತೆ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳುತ್ತೇನೆ. ಏಪ್ರಿಲ್ 3ರ ರಂದು ಮಂಡ್ಯದಲ್ಲಿಯೇ ಅಭಿಮಾನಿಗಳ ಸಮ್ಮುಖದಲ್ಲಿ ನನ್ನ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟಪಡಿಸಿದ್ದಾರೆ.
ಅಭಿಮಾನಿಗಳ ಜೊತೆ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲಿಂದಲೂ ಜನಾಭಿಪ್ರಾಯ ತೆಗೆದುಕೊಂಡೇ ನಾನು ನಿರ್ಧಾರ ಮಾಡುತ್ತೇನೆ. ಇವತ್ತು ಜನರು ಅಭಿಪ್ರಾಯ ಹೇಳಿದ್ದಾರೆ. ನಾನೂ ಆಪ್ತರ ಜೊತೆ ಚರ್ಚೆ ಮಾಡಬೇಕು. ಮಂಡ್ಯದಲ್ಲೇ ತೀರ್ಮಾನ ಪ್ರಕಟ ಮಾಡುತ್ತೇನೆ. ಇದು ಅಷ್ಟು ಸುಲಭವಾಗಿ ತೆಗೆದುಕೊಳ್ಳುವ ನಿರ್ಧಾರ ಅಲ್ಲ. ನನಗೆ ನನ್ನ ಭವಿಷ್ಯ ಮುಖ್ಯವಲ್ಲ, ನಮ್ಮ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹಾಗೂ ಮತದಾರರ ಹಿತ ಮುಖ್ಯ ಎಂದರು.
ಕಳೆದ ಬಾರಿ ಇದ್ದ ಸ್ಥಿತಿಯೇ ಈಗಲೂ ಬಂದಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕಾರಣಕ್ಕೆ ಕಳೆದ ಬಾರಿ ಸೀಟು ಕೊಡಲ್ಲ ಅಂತಾ ಕಾಂಗ್ರೆಸ್ ಹೇಳಿತ್ತು. ಈಗ ಬಿಜೆಪಿ-ಜೆಡಿಎಸ್ ಮೈತ್ರಿ ಕಾರಣಕ್ಕೆ ಸೀಟು ನೀಡಲ್ಲ ಎಂದು ಬಿಜೆಪಿ ತಿಳಿಸಿದೆ. ಮಂಡ್ಯ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ, ಇಲ್ಲ ಎನ್ನಲ್ಲ. ಆದರೆ, ಈಗ ಅದು ಜೆಡಿಎಸ್ಗೆ ಸಿಕ್ಕಿದೆ. ಹಾಗಾ,ಗಿ ಬಿಜೆಪಿಯಿಂದ ಅಲ್ಲಿ ನನಗೆ ಅವಕಾಶ ಇಲ್ಲವಾಗಿದೆ ಎಂದು ತಿಳಿಸಿದರು.