ಬೆಳಗಾವಿ: ಮೂಡಿಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಈ ಬಾರಿ ಪಿಯುಸಿ ವಿದ್ಯಾರ್ಥಿಗಳಿಗೆ 10 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಘೋಷಿಸಿದೆ ಎಂದು ಸಂಸ್ಥೆಯ ಪತ್ರಿಕೋಧ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 10ನೇ ತರಗತಿಯಲ್ಲಿ ಸಿಬಿಎಸ್ಸಿ (ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ), ಐಸಿಎಸ್ಇ(ಭಾರತೀಯ ಪ್ರೌಢ ಶಿಕ್ಷಣದ ಪ್ರಮಾಣ ಪತ್ರ) ಹಾಗೂ ರಾಜ್ಯ ಪಠ್ಯಕ್ರಮ(ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ) ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವಿದ್ಯಾರ್ಥಿ ವೇತನ ಪರೀಕ್ಷೆ ಬರೆಯಬಹುದು. ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ಅರ್ಹತೆ ಪಡೆದ ವಿದ್ಯಾರ್ಥಿಗಳು ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯಲು ಅರ್ಹರಾಗುತ್ತಾರೆ ಎಂದು ಅವರು ತಿಳಿಸಿದರು.
ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಸಾಮರ್ಥ್ಯ ಕುರಿತು 100 ಅಂಕಗಳ ಪರೀಕ್ಷೆಯು ಮಾರ್ಚ್ 31ರಂದು ಸಿಬಿಎಸ್ಸಿ ಮತ್ತು ಐಸಿಎಸ್ಇ ವಿದ್ಯಾರ್ಥಿಗಳಿಗೆ ಹಾಗೂ ಏಪ್ರಿಲ್ 14ರಂದು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಮೂಡುಬಿದಿರೆಯ ವಿದ್ಯಾಗಿರಿ ಶ್ರೀಮತಿ ಸುಂದರಿ ಆಳ್ವ ಆವರಣದಲ್ಲಿನ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷಾ ಪತ್ರಿಕೆ ಇರಲಿದೆ ಎಂದು ತಿಳಿಸಿದರು.
ಸಿಬಿಎಸ್ಸಿ ಮತ್ತು ಐಸಿಎಸ್ಇ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನಾಂಕ, ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಏಪ್ರಿಲ್ 10ರೊಳಗೆ ಅರ್ಜಿ ಸಲ್ಲಿಸಬಹುದು. http://scholarship.alvas.org/puc/login.php ವೆಬ್ ಸೈಟ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಸಾದ ಶೆಟ್ಟಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹೊಟೆಲ್ ಉದ್ಯಮಿ ವಿಠಲ ಹೆಗಡೆ, ಸಂಸ್ಥೆ ಆಡಳಿತಾಧಿಕಾರಿ ಪದ್ಮರಾಜ್ ರೈ ಉಪಸ್ಥಿತರಿದ್ದರು.
ಇದನ್ನೂ ಓದಿ: UPSC ಪ್ರಿಲಿಮ್ಸ್ ಪರೀಕ್ಷೆ ಜೂನ್ 16ಕ್ಕೆ ಮುಂದೂಡಿಕೆ