ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಗೆ ಕೇಂದ್ರ ಸರ್ಕಾರ ಅತ್ಯಾಧುನಿಕ 'ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ'ಕ್ಕೆ ಮಂಜೂರಾತಿ ನೀಡಿದೆ. ಉತ್ತರ ಕರ್ನಾಟಕದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಈ ಪ್ರಯೋಗಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಇದೀಗ ಅಸ್ತು ಎಂದಿದೆ.
ಕಿಮ್ಸ್ನಲ್ಲಿ ಅತ್ಯಾಧುನಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಸ್ಥಾಪನೆಗಾಗಿ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನವದೆಹಲಿ (NCDC) ಮತ್ತು ಕಿಮ್ಸ್ ನಿರ್ದೇಶಕರ ನಡುವೆ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಿದ್ದಾರೆ.
ಸಚಿವ ಪ್ರಹ್ಲಾದ್ ಜೋಶಿ ಪ್ರಯತ್ನಕ್ಕೆ ಲಭಿಸಿದ ಫಲ: ಹುಬ್ಬಳ್ಳಿಯಲ್ಲಿ ಈ ಪ್ರಯೋಗಾಲಯ ನಿರ್ಮಾಣಕ್ಕಾಗಿ ಜೆ.ಪಿ. ನಡ್ಡಾ ಅವರು ಆರೋಗ್ಯ ಸಚಿವರಾಗಿದ್ದಾಗಲೇ ಧಾರವಾಡ ಸಂಸದರು ಆಗಿರುವ ಸಚಿವ ಪ್ರಹ್ಲಾದ್ ಜೋಶಿ ಅವರು ಮನವಿ ಮಾಡಿದ್ದರು. ಅವರ ಸತತ ಪ್ರಯತ್ನದ ಫಲವಾಗಿ ಇಂದು ಪ್ರಯೋಗಾಲಯ ಸ್ಥಾಪನೆ ಸಾಕಾರಗೊಂಡಿದೆ.
ದೇಶದ 8 ಕಡೆ ಶಾಖೆ: ಪ್ರಸ್ತುತ, ದೇಶದ 8 ಕಡೆಗಳಲ್ಲಿ ಶಾಖೆಗಳನ್ನು ಹೊಂದಿರುವ ಈ ಸಂಶೋಧನಾ ಮತ್ತು ರೋಗ ನಿಯಂತ್ರಣ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಹುಬ್ಬಳ್ಳಿಯಲ್ಲಿ ಸ್ಥಾಪನೆಗೂ ಇದೀಗ ಹಸಿರು ನಿಶಾನೆ ತೋರಿದ್ದಾರೆ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. ತಮ್ಮ ಪ್ರಸ್ತಾಪ, ಮನವಿಯನ್ನು ಪುರಸ್ಕರಿಸಿ ಪ್ರಧಾನಿ ಮೋದಿ ಅವರು, ಪ್ರಸ್ತುತ ಪ್ರಾದೇಶಿಕ ಪ್ರಯೋಗಾಲಯವನ್ನು ಮಂಜೂರು ಮಾಡಿದ್ದಾರೆ. ಇದಕ್ಕಾಗಿ ಕಿಮ್ಸ್ ಅವರಣದಲ್ಲಿ 27 ಗುಂಟೆ ಪ್ರತ್ಯೇಕ ಜಾಗವನ್ನೂ ಮೀಸಲಿರಿಸಲಾಗಿದೆ ಎಂದು ಸಚಿವ ಪ್ರಹ್ಲಾದ ಜೋಶಿ ಮಾಹಿತಿ ನೀಡಿದ್ದಾರೆ.
₹16 ಕೋಟಿ ವೆಚ್ಚದಲ್ಲಿ ಪ್ರಯೋಗಾಲಯ ನಿರ್ಮಾಣ: ಸಂಪೂರ್ಣ ಕೇಂದ್ರ ಸರ್ಕಾರದ ಪ್ರಾಯೋಜಿತವಾದ ಈ ಪ್ರಯೋಗಾಲಯದ ಶಾಖೆಗೆ ಅಂದಾಜು 16 ಕೋಟಿ ರೂಪಾಯಿ ವೆಚ್ಚವಾಗಲಿದೆ . ಇದಕ್ಕಾಗಿ 27 ಗುಂಟೆ ಜಾಗ ಮೀಸಲಿಡಲಾಗಿದೆ. ಎಚ್ 1 ಎನ್ I (H1N1), ಕೊರೋನಾ, ಚಿಕನ್ ಗುನ್ಯಾ, ನಿಫಾದಂತಹ ಸಾಂಕ್ರಾಮಿಕ ರೋಗಗಳು ಬದಲಾದ ರೂಪದಲ್ಲಿ ಮತ್ತೆ ಮತ್ತೆ ಹರಡುತ್ತಿರುವ ಕಾರಣ ಉತ್ತರ ಕರ್ನಾಟಕ ಭಾಗದಲ್ಲಿ ಈ ಪ್ರಯೋಗಾಲಯದ ಅಗತ್ಯತೆ ಇತ್ತೆಂದು ಜೋಶಿ ಪ್ರತಿಪಾದಿಸಿದ್ದಾರೆ.
''ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯಕ್ಕಾಗಿ ದೂರದ ಪ್ರದೇಶಗಳಿಗೆ ಅಲೆಯುವುದರಿಂದ ರೋಗ ಪೀಡಿತರ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಅಲ್ಲದೇ, ಕೆಲವೊಮ್ಮೆ ಪ್ರಾಣ ಹಾನಿ ಸಂಭವವನ್ನೂ ತಳ್ಳಿ ಹಾಕುವಂತಿರಲಿಲ್ಲ. ಹೀಗಾಗಿ ಈ ಅಂಶಗಳನ್ನು ಆರೋಗ್ಯ ಸಚಿವರಾಗಿದ್ದ ನಡ್ಡಾ ಮತ್ತು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರ ಪರಿಣಾಮ ಇಂದು ಪ್ರಯೋಗಾಲಯ ಸ್ಥಾಪನೆ ಒಡಂಬಡಿಕೆ ಸಾಫಲ್ಯ ಕಂಡಿದೆ'' ಎಂದು ಜೋಶಿ ತಿಳಿಸಿದ್ದಾರೆ.
''ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಸಾಸ್ಟಕ್ಟರ್ ಮಿಶನ್ ಅಡಿ BSL3 ಫೆಸಿಲಿಟಿಸ್ ಮಾದರಿಯ ಒಟ್ಟು 13 ಹೊಸ (4 ಮೊಬೈಲ್ ಮತ್ತು 9 ಸಾಂಸ್ಥಿಕ) ಪ್ರಯೋಗಾಲಯಗಳನ್ನು ಆಯ್ದ ಆರೋಗ್ಯ ಸಂಸ್ಥೆಗಳಲ್ಲಿ ಸ್ಥಾಪಿಸಲಾಗುತ್ತಿದ್ದು, ಈ ಪೈಕಿ ಹುಬ್ಬಳ್ಳಿಯ ಕಿಮ್ಸ್ ಕೂಡಾ ಸೇರಿದೆ'' ಎಂದು ಸಚಿವ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ.
ಶೀಘ್ರವೇ ಭೂಮಿಪೂಜೆ: ಹುಬ್ಬಳ್ಳಿಯಲ್ಲಿ ಶೀಘ್ರದಲ್ಲೇ ಪ್ರಾದೇಶಿಕ ವೈರಾಣು ಸಂಶೋಧನಾ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಶಾಖೆ ನಿರ್ಮಾಣಕ್ಕೆ ಭೂಮಿ ಪೂಜೆ ಸಹ ನೆರವೇರಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ. ಹುಬ್ಬಳ್ಳಿಗೆ ಈ ಸಂಶೋಧನಾ ಕೇಂದ್ರವನ್ನು ಮಂಜೂರು ಮಾಡಿದ ಪ್ರಯುಕ್ತ ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಕೇಂದ್ರ ಆರೋಗ್ಯ ಸಚಿವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ಗೆ ಸಿಟ್ಟು, ಸ್ವಲ್ಪ ಮುಂಗೋಪ ಇದೆಯೇ ಹೊರತು ಕೊಲೆ ಮಾಡುವ ವ್ಯಕ್ತಿಯಲ್ಲ: ಶಾಸಕ ಉದಯ್ ಗೌಡ - MLA uday gowda