ತುಮಕೂರು: ಪಾವಗಡ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನ ವಿವಿಧ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಿದ್ದ 7 ಮಂದಿ ಮಹಿಳೆಯರ ಪೈಕಿ ಮೂವರು ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಸಂತಾನಹರಣ, ಗರ್ಭಕೋಶದ ಚಿಕಿತ್ಸೆ ಹಾಗೂ ಸಿಜೇರಿಯನ್ ಒಳಗಾಗಿದ್ದ ಮೂವರು ಮಹಿಳೆಯರು ಐದು ದಿನಗಳ ಅವಧಿಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ದೂರುಗಳಿವೆ.
ಈ ಸಾವಿಗೆ ನ್ಯಾಯ ಒದಗಿಸುವಂತೆ ಮೃತ ಅಂಜಲಿಯ ಭಾವಚಿತ್ರ ಹಿಡಿದು ಕುಟುಂಬಸ್ಥರು ಪಾವಗಡದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಈ ಬೆನ್ನಲ್ಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವೈದ್ಯ ಸೇರಿ ಮೂವರನ್ನು ಕರ್ತವ್ಯದಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.
ಫೆ. 22ರಂದು 7 ಮಂದಿಗೆ ಹೆರಿಗೆ ಸೇರಿ ವಿವಿಧ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸಂತಾನಹರಣ ಚಿಕಿತ್ಸೆಗೆ ಒಳಗಾಗಿದ್ದ ವೀರ್ಲಗೊಂದಿ ಗ್ರಾಮದ ಮಹಿಳೆ ಅನಿತಾ (30) ಚಿಕಿತ್ಸೆ ಪಡೆದ ದಿನವೇ ಮೃತಪಟ್ಟಿದ್ದರು. ರಾಜವಂತಿ ಮೂಲದ ಅಂಜಲಿಗೆ ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಇವರ ಸ್ಥಿತಿ ಗಂಭೀರವಾಗಿದ್ದರಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಫೆ. 24 ರಂದು ಮೃತಪಟ್ಟಿದ್ದರು.
ಬ್ಯಾಡನೂರು ಗ್ರಾಮದ ನರಸಮ್ಮಗೆ (40) ಗರ್ಭಕೋಶದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಇವರ ಸ್ಥಿತಿ ಕೂಡ ಗಂಭೀರವಾಗಿದ್ದರಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರವಾನಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಫೆ. 25ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಮೂರು ಸಾವಿಗೆ ನ್ಯಾಯ ಒದಗಿಸುವಂತೆ ಅಂಜಲಿ ಕುಟುಂಬಸ್ಥರು ಪಾವಗಡದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಅಂಜಲಿಯ ಸಂಬಂಧಿಕ ಮಹಿಳೆಯೊಬ್ಬರು ಮಾತನಾಡಿ, "ಅಂಜಲಿ ಸಾವಿಗೆ ವೈದ್ಯರೇ ಕಾರಣ" ಎಂದು ಆರೋಪಿಸಿದ್ದರು.
ತಪ್ಪಿತಸ್ಥರ ವಿರುದ್ಧ ಕ್ರಮ ಎಂದ ತಹಶೀಲ್ದಾರ್: "ರಾಜ್ಯ ಮತ್ತು ಜಿಲ್ಲಾ ತನಿಖಾ ತಂಡದಿಂದ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದು, ಎಲ್ಲಿ ಲೋಪವಾಗಿದೆಯೋ ಅದರ ಪರಿಶೀಲನೆ ಮಾಡಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಕೂಡಲೇ ಎಲ್ಲಿ ಲೋಪವಾಗಿದೆ ಎಂಬುದನ್ನು ತಿಳಿದುಕೊಂಡು ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಗ್ರೇಡ್ ತಹಶೀಲ್ದಾರ್ ಮೂರ್ತಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ನೀಡಿದರು.
ತಾಲೂಕು ಆಡಳಿತ ಅಧಿಕಾರಿ ಡಾಕ್ಟರ್ ಕಿರಣ್ ಮಾತನಾಡಿ, "ಫೆಬ್ರವರಿ 22ರಂದು ಎರಡು ಗರ್ಭಕೋಶ ಶಸ್ತ್ರಚಿಕಿತ್ಸೆ ಹಾಗೂ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಸಾವನ್ನಪ್ಪಿದವರಲ್ಲಿ ಲಿವರ್ ಮತ್ತು ಕಿಡ್ನಿಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದೆವು. ಜೊತೆಗೆ ಉಳಿದ ನಾಲ್ಕು ಜನರಲ್ಲಿ ಬಿಳಿ ರಕ್ತಕಣಗಳ ಕೊರತೆ ಕಂಡು ಬಂದಿತ್ತು. ಹಾಗೂ ಆ ಮಹಿಳೆಯರಲ್ಲಿ ನಿಶಕ್ತಿ ಕಂಡು ಬಂದ ಹಿನ್ನೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದು, ಗುಣಮುಖರಾಗುತ್ತಿದ್ದಾರೆ" ಎಂದು ಹೇಳಿದ್ದಾರೆ.
ವರದಿ ಬಂದ ಬಳಿಕ ನಿಖರ ಕಾರಣ ಪತ್ತೆ: ಏಳು ಜನರಲ್ಲಿ ನಾಲ್ವರು ಗರ್ಭಿಣಿಯರಿಗೆ ಎರಡನೇ ಸಿಜೇರಿಯನ್ ಆಗಿದ್ದು, ಸಾವನ್ನಪ್ಪಿದ ಮೂವರಲ್ಲಿ ಅಂಜಲಿ ಅವರಿಗೆ ಸಿಜೇರಿಯನ್ ಹಾಗೂ ಸಂತಾನಹರಣ ಶಸ್ತ್ರಚಿಕಿತ್ಸೆ, ಅನಿತಾ ಅವರಿಗೆ ಸಹಜ ಹೆರಿಗೆ ಆಗಿತ್ತು. ರಾಜ್ಯಮಟ್ಟದಿಂದ ಹಲವು ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ವರದಿ ಬಂದ ಕೂಡಲೇ ನಿಖರ ಮಾಹಿತಿ ತಿಳಿಯಲಿದೆ" ಎಂದು ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ತಿರುಪತಯ್ಯ ತಿಳಿಸಿದ್ದಾರೆ.
ಕರ್ತವ್ಯದಿಂದ ವಜಾ: ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಸ್ತ್ರೀರೋಗ ತಜ್ಞೆ ಡಾ. ಪೂಜಾ, ಶುಶ್ರೂಷಣಾಧಿಕಾರಿ ಪದ್ಮಾವತಿ ಹಾಗೂ ಒಟಿ ತಂತ್ರಜ್ಞ ಕಿರಣ್ ಬಿ.ಆರ್. ಅವರನ್ನು ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಜಿಲ್ಲಾ ಆರೋಗ್ಯ ಸಂಘದ ಕರಾರು ಒಪ್ಪಂದದ ಪ್ರಕಾರ ಕರ್ತವ್ಯ ಲೋಪ, ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿ ತೋರಿದ ಹಿನ್ನೆಲೆಯಲ್ಲಿ ಕರ್ತವ್ಯದಿಂದ ವಜಾಗೊಳಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ರೋಗಿಗಳಲ್ಲಿ ಸೋಂಕು ಹರಡಿರುವ ಚಿಹ್ನೆಗಳು ಪತ್ತೆಯಾಗಿದ್ದು, ಮತ್ತು ಶಸ್ತ್ರಚಿಕಿತ್ಸಾ ಪ್ರಕ್ರಿಯೆಯಲ್ಲಿ ಲೋಪವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸಾಮಾನ್ಯವಾಗಿ ಶಸ್ತ್ರಚಿಕಿತ್ಸಾ ಕೊಠಡಿ ಧೂಮಿಕರಣ ಮಾಡದೇ ಇದ್ದಾಗ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿಯ ಸಲಕರಣೆಗಳನ್ನು AUTO CLAVE ಮಾಡದೇ ಇದ್ದ ಸಂದರ್ಭದಲ್ಲಿ ಈ ರೀತಿಯ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಇದು ಮೂವರ ಮರಣಕ್ಕೆ ಕಾರಣವಾಗಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಜಿಲ್ಲಾ ಆರೋಗ್ಯ ಸಂಘದ ಕರಾರು ಒಪ್ಪಂದದ ಪ್ರಕಾರ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕಲಬುರಗಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಮಾವ, ಸೊಸೆ ದುರ್ಮರಣ