ದಾವಣಗೆರೆ: ಸಂಸದ ಜಿ ಎಂ ಸಿದ್ದೇಶ್ವರ್ ಅವರು ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ನಿವಾಸಕ್ಕೆ ಮೊದಲ ಬಾರಿಗೆ ಭೇಟಿ ನೀಡಿ ಕೆಲ ಕಾಲ ಲೋಕಸಭೆ ಚುನಾವಣೆ ಬಗ್ಗೆ ಮಾತುಕತೆ ನಡೆಸಿದರು.
ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಅತೃಪ್ತರ ಸಂಧಾನ ಸಭೆ ಬಳಿಕ ದಾವಣಗೆರೆ ತಾಲೂಕು ಶಿರಮಗೊಂಡ ಹಳ್ಳಿಯಲ್ಲಿರುವ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಿನ್ನೆ ಬಿಎಸ್ವೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಸ್ ಎ ರವೀಂದ್ರನಾಥ್ ಅವರ ಸಮ್ಮುಖದಲ್ಲಿ ಚುನಾವಣೆ ಮಾಡಬೇಕೆಂದು ನಿರ್ಧರಿಸಲಾಗಿದೆ. ಇಂದು ಸಂಜೆ ಚುನಾವಣೆ ಸಮಿತಿ ಸಭೆ ಇದೆ. ಚುನಾವಣೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲೆಯ ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡುತ್ತೇವೆ. ಕ್ಷೇತ್ರದಲ್ಲಿ ನಮ್ಮ ಮನೆಯವರು ಈಗಾಗಲೇ ಪ್ರಚಾರ ಶುರು ಮಾಡಿದ್ದಾರೆ. ಅವರು ಕೂಡ ರೈತ ಮಹಿಳೆಯಾಗಿ ಏಳು ಲೋಕಸಭಾ, ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ಜನರ ಬೆಂಬಲವೂ ಇದ್ದು, ಮತದಾರರು ಹೆಚ್ಚು ಮತ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಎಂ ಪಿ ರೇಣುಕಾಚಾರ್ಯ ಅವರ ಮನೆಗೆ ಹೋಗಿ ಮಾತುಕತೆ ನಡೆಸುವೆ, ಎಲ್ಲವೂ ಕೆಲವೇ ದಿನಗಳಲ್ಲಿ ಸರಿಯಾಗುತ್ತೆ. ಹಿಂದಿನ ದಿನ ನಡೆದ ಸಂಧಾನ ಸಭೆಯಲ್ಲಿ ಗಲಾಟೆ ನಡೆದಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದೇಶ್ವರ್, ನನಗೆ ಸಭೆಯಲ್ಲಿ ನಡೆದಿರುವ ಗಲಾಟೆ ಬಗ್ಗೆ ಗೊತ್ತಿಲ್ಲ. ಗಲಾಟೆ ಮಾಡಿದವರ ವಿರುದ್ಧ ಕ್ರಮ ಜರುಗಿಸುವಂತೆ ಬಿ ವೈ ವಿಜಯೇಂದ್ರ ಅವರಿಗೆ ಪತ್ರ ಬರೆದಿರುವ ಬಗ್ಗೆ ನನಗೇನು ಗೊತ್ತಿಲ್ಲ. ಸಭೆಯಲ್ಲಿ ಎಲ್ಲ ನಾಯಕರು ಒಟ್ಟಾಗಿ ಪ್ರಚಾರ ಮಾಡುವ ಕುರಿತು ಚರ್ಚಿಸಿದ್ದೇವೆ ಎಂದರು.
ಕಾಂಗ್ರೆಸ್ಅನ್ನು ಐದು ಬಾರಿ ಸೋಲಿಸಿದ್ದೇವೆ: ನಮ್ಮಲ್ಲಿ ಭಿನ್ನಮತ ಇಲ್ಲ. ಇಲ್ಲಿ ಕಾಂಗ್ರೆಸ್ ಹೆಂಗೆ ಗೆಲ್ಲುತ್ತೆ, ನಾನು ನಮ್ಮ ಅಪ್ಪ ಸೇರಿ ಕಾಂಗ್ರೆಸ್ನ್ನು ಐದು ಬಾರಿ ಸೋಲಿಸಿದ್ದೇವೆ. ಈಗಲೂ ಕಾಂಗ್ರೆಸ್ ಅಭ್ಯರ್ಥಿ ಸೋಲುತ್ತಾರೆ. ಮೇ 7ರ ನಂತರ ಇಷ್ಟೇ ಲೀಡ್ನಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆರೆಂದು ಹೇಳುವೆ ಎಂದರು.
ನಾನು ಬಿಜೆಪಿ ಮೋದಿ ಪರ ಮತಯಾಚನೆ ಮಾಡುವೆ: ರೇಣುಕಾಚಾರ್ಯ
ನಾನು ಬಿಜೆಪಿ ಮತ್ತು ಮೋದಿ ಪರ ಮತಯಾಚನೆ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಅವರ ಹೆಸರು ಹೇಳದೆ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ. ಅಧಿಕೃತ ಅಭ್ಯರ್ಥಿ ಪರ ಮನಬಿಚ್ಚಿ ಮಾತನಾಡಲು ರೇಣುಕಾಚಾರ್ಯ ಹಿಂದೇಟು ಹಾಕಿದ್ದು, ಕೇವಲ ಪಕ್ಷ ಮತ್ತು ಮೋದಿ ಹೆಸರು ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿನ್ನೆ ನಡೆದ ಸಂಧಾನ ಸಭೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಸಭೆಯಲ್ಲಿ ಲೋಕಸಭೆ ಚುನಾವಣೆ ಬಗ್ಗೆ ಪ್ರಮುಖ ವಿಷಯಗಳು ಚರ್ಚೆ ಆಗಿವೆ, ಆದರೆ ಎಲ್ಲವನ್ನು ಮಾಧ್ಯಮದ ಮುಂದೆ ಹೇಳಲು ಆಗುವುದಿಲ್ಲ. ಗಲಾಟೆ ವಿಚಾರಕ್ಕೆ ನೋ ಕಾಮೆಂಟ್ಸ್. ಬಿಜೆಪಿ ಶಿಸ್ತಿನ ಪಕ್ಷ, ಸಣ್ಣಪುಟ್ಟ ವ್ಯತ್ಯಾಸ ಇರುತ್ತದೆ. ಸ್ಥಾನ ಬದಲಾವಣೆಗೆ ಯಾವುದೇ ಪಟ್ಟು ಹಿಡಿದಿಲ್ಲ. ಮುಂದೆ ಏನಾಗುತ್ತದೆ ಅನ್ನೋದನ್ನು ಕಾದು ನೋಡೋಣ ಎಂದು ತಿಳಿಸಿದರು.
ಇದನ್ನೂಓದಿ:ನಾಲ್ಕು ದಿನಗಳಲ್ಲಿ ಬಂಡಾಯ ಶಮನ: ಬಿ.ವೈ.ವಿಜಯೇಂದ್ರ - B Y Vijayendra