ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಕಾಫಿ ಡೇಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.
ಬೆಂಗಳೂರಿನ ಸದಾಶಿವನಗರದಿಂದ ಹೊರಡಿರುವ ಎಸ್. ಎಂ. ಕೃಷ್ಣ ಅವರ ಪಾರ್ಥಿವ ಶರೀರವು ಈಗಾಗಲೇ ರಾಮನಗರ ತಲುಪಿದೆ. ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ, ಮದ್ದೂರಿನತ್ತ ಸಾಗಲಿದೆ. ಅಂತ್ಯ ಸಂಸ್ಕಾರದ ಸ್ಥಳವಾದ ಸೋಮನಹಳ್ಳಿಗೆ ಎಸ್. ಎಂ. ಕೃಷ್ಣ ಅವರ ಪತ್ನಿ ಪ್ರೇಮ ಸೇರಿದಂತೆ ಕುಟುಂಬಸ್ಥರು ಆಗಮಿಸಿದ್ದಾರೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕೂಡ ಭೇಟಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಎಸ್. ಎಂ. ಕೃಷ್ಣ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಗಣ್ಯರು ಸೇರಿ ಮಠಾಧೀಶರು, ವಿಐಪಿಗಳು ಸೋಮನಹಳ್ಳಿಗೆ ಆಗಮಿಸುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗೆ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಿಂದ ಹೊರಟಿರುವ ಎಸ್.ಎಂ.ಕೃಷ್ಣ ಪಾರ್ಥಿವ ಶರೀರ: ಮಧ್ಯಾಹ್ನ ಹುಟ್ಟೂರಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ
ಅಂತಿಮ ಸಂಸ್ಕಾರಕ್ಕೆ ಶ್ರೀಗಂಧದ ಕಟ್ಟಿಗೆ: ಶ್ರೀಗಂಧದ ಮೂಲಕ ಎಸ್. ಎಂ. ಕೃಷ್ಣ ಅವರ ಅಗ್ನಿ ಸ್ಪರ್ಶಕ್ಕೆ ಸಕಲ ಸಿದ್ಧತೆ ನಡೆಸಿದ್ದು, ಸ್ಥಳಕ್ಕೆ ಶ್ರೀಗಂಧದ ಮರದ ತುಂಡುಗಳನ್ನು ಕೂಡ ತರಲಾಗಿದೆ. ASF ಮಹಾದೇವಸ್ವಾಮಿ ಅವರಿಂದ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಹಸ್ತಾಂತರಿಸಲಾಗಿದೆ.