ಮಂಗಳೂರು: ಮಂಗಳೂರಿನಿಂದ ಅಬುಧಾಬಿಗೆ ಸಂಚರಿಸುವ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಏರ್ ಇಂಡಿಯಾ ಎಕ್ಸ್ಪ್ರೆಸ್ ನಿರ್ಧರಿಸಿದ್ದು, ವಾರದಲ್ಲಿ ನಾಲ್ಕು ದಿನ ಸಂಚರಿಸುತ್ತಿದ್ದ ವಿಮಾನಗಳು ಜುಲೈ 22 ರಿಂದ ಪ್ರತಿದಿನ ಕಾರ್ಯಾಚರಿಸಲಿವೆ.
ಇಂಡಿಗೋ 4 ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ - 1 ವಿಮಾನ ಸೇರಿ ನಿತ್ಯ 5 ವಿಮಾನಗಳು ಬೆಂಗಳೂರು - ಮಂಗಳೂರು ನಡುವೆ ಕಾರ್ಯಾಚರಿಸುತ್ತಿವೆ. ಜುಲೈ 8ರಿಂದ ಈ ಸಂಖ್ಯೆ 6ಕ್ಕೆ ಏರಿಕೆ ಆಗಲಿದೆ.
ಏರ್ ಇಂಡಿಯಾ ಎಕ್ಸ್ಪ್ರೆಸ್ 2 ನೇ ವಿಮಾನ ಬೆಂಗಳೂರಿನಿಂದ ಮಂಗಳೂರಿಗೆ ಯಾನ ಆರಂಭಿಸುತ್ತಿದೆ. ಇದು ಜುಲೈ 22ರಿಂದ ಲಭ್ಯವಾಗಲಿದ್ದು, ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚರಿಸಲಿದೆ. ಈ ವಿಮಾನವು ಬೆಂಗಳೂರಿನಿಂದ ಮಂಗಳೂರಿಗೆ ಬಂದು ಅಬುಧಾಬಿಯತ್ತ ಪ್ರಯಾಣ ಬೆಳೆಸಲಿದೆ.
ಬೆಂಗಳೂರಿಗೆ ಇನ್ನಷ್ಟು ವಿಮಾನ: ಆಗಸ್ಟ್ 1 ರಿಂದ ಬೆಂಗಳೂರು - ಮಂಗಳೂರು ಸೆಕ್ಟರ್ನಲ್ಲಿ ವಾರದಲ್ಲಿ ಮೂರು ದಿನ (ಸೋಮವಾರ, ಬುಧವಾರ ಮತ್ತು ಶುಕ್ರವಾರ) ಏರ್ ಇಂಡಿಯಾ ಎಕ್ಸ್ಪ್ರೆಸ್ನ ಇನ್ನೊಂದು ವಿಮಾನ ಸೇವೆ ಆರಂಭಿಸಲಾಗುವುದು. ಮುಂಬೈ - ಮಂಗಳೂರು ಸೆಕ್ಟರ್ನಲ್ಲಿಯೂ ಏರ್ ಇಂಡಿಯಾ ಎಕ್ಸ್ಪ್ರೆಸ್ ಮಧ್ಯಾಹ್ನದ ನಂತರದ ವಿಮಾನವನ್ನು ಆರಂಭಿಸಲಾಗವುದು ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಇಮೇಲ್; 13 ವರ್ಷದ ಬಾಲಕ ವಶಕ್ಕೆ! - Delhi Airport Bomb Scare