ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ಐವರು ಹೊಸ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಎಐಸಿಸಿ ನೇಮಿಸಿದೆ. ಶಾಸಕ ತನ್ವೀರ್ ಸೇಟ್, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ಶಾಸಕ ವಿನಯ್ ಕುಲಕರ್ಣಿ, ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮತ್ತು ವಸಂತ ಕುಮಾರ್ ಅವರನ್ನು ನೂತನ ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ.
ಈ ಮುಂಚೆ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ರಾಮಲಿಂಗಾ ರೆಡ್ಡಿ, ಸಲೀಂ ಅಹ್ಮದ್, ಚಂದ್ರಪ್ಪ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರು. ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ರಾಮಲಿಂಗಾ ರೆಡ್ಡಿ ಸಚಿವರಾದ ಬಳಿಕ ಅವರಿಗೆ ಪಕ್ಷ ಸಂಘಟನೆಯತ್ತ ಹೆಚ್ಚಿನ ಗಮನ ನೀಡುವುದು ಕಷ್ಟ ಸಾಧ್ಯವಾಗಿತ್ತು. ಹೀಗಾಗಿ ಹೊಸ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ವಿಧಾನಪರಿಷತ್ ಸದಸ್ಯ ಸಲೀಮ್ ಅಹ್ಮದ್ ಅವರ ಬದಲಾಗಿ ಈ ಬಾರಿ ತನ್ವೀರ್ ಸೇಟ್ ಅವರಿಗೆ ಸ್ಥಾನ ನೀಡಲಾಗಿದೆ. ಉಳಿದಂತೆ ಒಕ್ಕಲಿಗ, ಲಿಂಗಾಯತ, ಬಂಟ ಸಮುದಾಯಕ್ಕೆ ಸ್ಥಾನ ನೀಡಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಯಾಧ್ಯಕ್ಷರ ನೇಮಕ ಶೀಘ್ರ ಮಾಡಬೇಕು ಎಂಬ ಬೇಡಿಕೆ ಇತ್ತು. ಆದರೆ, ಸರ್ಕಾರ ರಚನೆಯಾಗಿ 10 ತಿಂಗಳಾದರೂ ಕಾರ್ಯಾಧ್ಯಕ್ಷರ ನೇಮಕ ಆಗಿರಲಿಲ್ಲ. ಇದರಿಂದ ಸಂಘಟನೆ ಕೆಲಸ ಕಾರ್ಯಗಳ ಮೇಲೂ ಪರಿಣಾಮ ಬೀರುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಲೋಕಸಮರ ಹಿನ್ನೆಲೆ ಇದೀಗ ಎಐಸಿಸಿ ನೇಮಕ ಮಾಡಿ ಆದೇಶ ಮಾಡಿದೆ.
ಪ್ರಚಾರ ಸಮಿತಿ ನೇಮಕ: ಜೊತೆಗೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ವಿನಯ್ ಕುಮಾರ್ ಸೊರಕೆ ಅವರನ್ನು ನೇಮಿಸಿದೆ. ಎಲ್.ಹನುಮಂತಯ್ಯ ಅವರನ್ನು ಪ್ರಚಾರ ಸಮಿತಿಯ ಸಹ ಅಧ್ಯಕ್ಷರನದನ್ನಾಗಿ ಮತ್ತು ಶಾಸಕ ರಿಜ್ವಾನ್ ಅರ್ಷದ್ ರನ್ನು ಪ್ರಚಾರ ಸಮಿತಿಯ ಉಪಾಧ್ಯಕ್ಷರನ್ನಾಗಿ ನೇಮಿಸಿದೆ.
ಇದನ್ನೂ ಓದಿ:ಬರ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ರಾಜ್ಯ ಸರ್ಕಾರ - Drought Relief