ಚಿತ್ರದುರ್ಗ: ಜಿಲ್ಲೆಯಲ್ಲಿ ನವ ದಂಪತಿ ಮಾಂಗಲ್ಯ ಧಾರಣೆ ಬಳಿಕ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ, ಇತರರಿಗೆ ಮಾದರಿಯಾದರು. ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ಸಾಗುತ್ತಿದೆ. ಯುವಕ,ಯುವತಿಯರ ಮಧ್ಯೆ ವೃದ್ಧ, ವೃದ್ಧೆಯರು ಕೂಡ ಅಷ್ಟೇ ಉತ್ಸಾಹದಿಂದ ತಮ್ಮ ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ.
ಆದರೆ, ಇಲ್ಲೊಂದು ಜೋಡಿ ಇವತ್ತು ಗಮನ ಸೆಳೆಯಿತು. ಲೋಕಸಭಾ ಚುನಾವಾಣಾ ದಿನದಂದೇ ಜೋಡಿಯೊಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಇದಲ್ಲದೇ, ಈ ಜೋಡಿ ಮಾಂಗಲ್ಯ ಧಾರಣೆ ಬಳಿಕ ಮದುವೆ ಮನೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾವಣೆ ಮಾಡಿದ್ದಾರೆ. ಇಂದು ಬೆಳ್ಳಂಬೆಳಿಗ್ಗೆ ಮಾಂಗಲ್ಯ ಧಾರಣೆ ಬಳಿಕ ವಿಜಾಪುರದ ಮತಗಟ್ಟೆ ಸಂಖ್ಯೆ 13ಕ್ಕೆ ಭೇಟಿಕೊಟ್ಟ ನವ ದಂಪತಿ ಅರುಣ್ - ಕಾವ್ಯ ಮತದಾನ ಮಾಡಿದರು. ಬಳಿಕ ಮದುವೆ ಮನೆಯಲ್ಲಿ ಎಲ್ಲರಿಗೂ ತಪ್ಪದೇ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದರು. ನಾವು ಮತ ಚಲಾವಣೆ ಮಾಡಿದ್ದೇವೆ ನೀವೂ ಕೂಡ ಮಾಡಿ ಎಂದು ಸಂದೇಶ ರವಾನಿಸಿದರು.
ಉಡುಪಿಯಲ್ಲಿ ಹಸೆಮಣೆ ಏರುವ ಮುನ್ನ ವಧುಗಳಿಂದ ಮತದಾನ: ಉಡುಪಿಯಲ್ಲಿ ಇಂದು ಸಾಲು ಸಾಲು ವಿವಾಹಗಳು ನಡೆದಿದ್ದು, ಹಸೆಮಣೆ ಏರುವ ಮುನ್ನ ವಧು ಸ್ಪೂರ್ತಿ ಆಚಾರ್ಯ ಎಂಬುವರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಯಡಬೆಟ್ಟು ಮತಕೇಂದ್ರದ ಮತಗಟ್ಟೆ ಸಂಖ್ಯೆ 209ರಲ್ಲಿ ಮತದಾನ ಮಾಡಿದರು. ಜೊತೆಗೆ, ವಧು ಹೃತಿಕಾ ಎಂಬುವರೂ ವಿವಾಹ ಸಭಾಂಗಣಕ್ಕೆ ಹೋಗುವ ಮುನ್ನ ಗೋಪಾಡಿ ಪಂಚಾಯತ್ನಲ್ಲಿ ಮತ ಚಲಾಯಿಸಿದರು. ಇನ್ನೊಂದೆಡೆ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊಂಚಾರು ಬೆಟ್ಟುವಿನ 22ನೇ ಮತಗಟ್ಟೆಯಲ್ಲಿ ವಧು ಅಶ್ವಿನಿ ಮದುವೆ ಉಡುಗೆಯಲ್ಲಿಯೇ ಬಂದು ಮತದಾನ ಮಾಡಿದ್ದಾರೆ.
ತುಮಕೂರು: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆಗೆ ಬಂದು ನವದಂಪತಿ ಮತ ಚಲಾಯಿಸಿದರು. ವಿವಾಹದ ಬಳಿಕ ವಧು-ವರರು ಮತದಾನ ಮಾಡಲು ಮದುವೆ ಉಡುಪಿನಲ್ಲೇ ಆಗಮಿಸಿದ್ದರು. ಪಾವಗಡದ ಟಿ.ಎನ್ ಬೆಟ್ಟದ ನವದಂಪತಿ ಲಕ್ಷ್ಮೀಪತಿ ಪಿ.ಹೆಚ್. ಮತ್ತು ನವ್ಯಶ್ರೀ ಮತ ಹಾಕಿದರು. ಯಾರೊಬ್ಬರೂ ಮತದಾನದಿಂದ ದೂರ ಉಳಿಯದಿರಿ ಎಂದು ಸಂದೇಶ ಸಾರಿದರು. ಸರತಿಸಾಲಿನಲ್ಲಿ ನಿಂತು ಸಂವಿಧಾನಬದ್ಧ ಹಕ್ಕು ಚಲಾವಣೆ ಮಾಡಿದರು.
ಚಿಕ್ಕಮಗಳೂರು: ಮದುವೆ ಆದ ಕೆಲ ಹೊತ್ತಲ್ಲೇ ನವದಂಪತಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮತಗಟ್ಟೆ 107ಕ್ಕೆ ಬಂದು ಮತದಾನ ಮಾಡಿದರು. ನವಜೋಡಿಗಳಾದ ರೋಷಿಣಿ ಹಾಗೂ ಸುಪ್ರೀತ್ ಅವರು ಹಕ್ಕು ಚಲಾಯಿಸಿದರು.
ಕುದುರೆ ಏರಿ ಬಂದು ಮತದಾನ: ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದ ಮತಗಟ್ಟೆ ಸಂಖ್ಯೆ 82ರಲ್ಲಿ ವೈದ್ಯರೊಬ್ಬರು ಕುದುರೆ ಏರಿ ಬಂದು ಮತದಾನ ಮಾಡಿದರು. ಕುದುರೆ ಮೇಲೆ ಬಂದು ಮತದಾರರ ಗಮನ ಸೆಳೆದ ಡಾ.ಶ್ರೀಧರ್, ಈ ಮಧ್ಯೆ ಮತದಾನ ಮಾಡಿದವರಿಗೆ ಉಚಿತ ಸಮೋಸ ಹಾಗೂ ಟೀ ವಿತರಿಸಿ ವಿನೂತನ ರೀತಿಯಲ್ಲಿ ಅರಿವು ಮೂಡಿಸಿದರು. ಸತ್ಯಕುಮಾರ್ ಫೌಂಡೇಶನ್ ಮೂಲಕ ಸಮಾಜ ಸೇವೆ ಮಾಡುತ್ತಿರುವ ಶ್ರೀಧರ್, ಆಸ್ಪತ್ರೆ ಹಾಗೂ ಉಚಿತ ದಾಸೋಹದ ಮೂಲಕ ಸಮಾಜಸೇವೆ ಮಾಡುತ್ತಿದ್ದಾರೆ.
ಚಳ್ಳಕೆರೆಯಲ್ಲಿ ಚಿತ್ರದುರ್ಗದ ಶಾಸಕ ಕೆ.ಸಿ. ವಿರೇಂದ್ರ ವೋಟ್: ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಎಸ್.ಜೆ.ಎಂ. ಶಾಲೆಯ ಮತಗಟ್ಟೆ ಸಂಖ್ಯೆ 75ರಲ್ಲಿ ಪುತ್ರಿ ಹಿಮಾನಿ ಜತೆ ಆಗಮಿಸಿ ಕಾಂಗ್ರೆಸ್ ಶಾಸಕ ಕೆ.ಸಿ. ವಿರೇಂದ್ರ ಮತ ಚಲಾಯಿಸಿದರು. ಮತದಾನ ಮಾಡಿದ ಬಳಿಕ ಶಾಹಿ ಹಾಕಿದ ಬೆರಳನ್ನು ಪ್ರದರ್ಶಿಸಿ ನಾವು ಮತ ಹಾಕಿದ್ದೇವೆ, ನೀವು ಮತದಾನ ಮಾಡಿ ಎಂದು ಮತದಾರರಿಗೆ ಕರೆ ನೀಡಿದರು.
ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಚುರುಕಿನ ಮತದಾನ ನಡೆಯುತ್ತಿದ್ದು, ಮೊದಲ ಯುವ ಮತದಾರರಿಂದ ಹಿಡಿದು ವೃದ್ಧರವರೆಗೆ ಉತ್ತಮ ರೀತಿಯಲ್ಲಿ ಮತದಾನ ಪ್ರಕ್ರಿಯೆ ಸಾಗುತ್ತಿದೆ.