ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಈ ಕುರಿತ ಪತ್ರ ತಮ್ಮ ಬಳಿ ಇದೆ ಎಂದು ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ತಿಳಿಸಿದರು.
ವಿಧಾನಸಭೆಯಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಗಾವಣೆಯಲ್ಲಿ ಇರುವ ಆರ್ಥಿಕ ಇಲಾಖೆ ಒಂದು ಪ್ರಸ್ತಾವನೆ ಸಲ್ಲಿಸಿದೆ. ಅಂಗನವಾಡಿ, ಆಶಾ, ಗ್ರಾಮ ಸಹಾಯಕರಿಗೆ, ಅತಿಥಿ ಉಪನ್ಯಾಸಕರಿಗೆ ಗ್ಯಾರಂಟಿ ಕೊಡುವುದು ಬೇಡ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ಇದನ್ನೆಲ್ಲಾ ನೋಡಿದರೆ ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆ. ಅರ್ಥಿಕ ಇಲಾಖೆ ಬರೆದಿರುವ ಪತ್ರ ನನ್ನ ಬಳಿ ಇದೆ ಎಂದು ಹೇಳಿದರು.
ಪ್ರಿಯಾಂಕ್ ಖರ್ಗೆಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 2 ಸಾವಿರ ಕೋಟಿ ರೂ. ಕಡಿಮೆ ಮಾಡಿದ್ದಾರೆ. ಸಾರಿಗೆ ಇಲಾಖೆ ಅನುದಾನವನ್ನು ಕಡಿಮೆ ಮಾಡಿದ್ದಾರೆ. ಮಾತೆತ್ತಿದರೆ ಹಿಂದುಳಿದ ವರ್ಗಗಳ ಪರವಾಗಿ ಮಾತನಾಡುವ ಸಿದ್ದರಾಮಯ್ಯ, ಪರಿಶಿಷ್ಟರ ಅಭಿವೃದ್ಧಿಗೆ ಕಡಿಮೆ ಅನುದಾನ ನೀಡಿದ್ದಾರೆ. ಈ ಬಗ್ಗೆ ಶಾಸಕಾಂಗ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಚರ್ಚೆ ಮಾಡಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಹಾಗೂ ಹಿಂದುಳಿದ ವರ್ಗಗಳ ಅಧೀನದಲ್ಲಿರುವ ನಿಗಮಗಳಿಗೂ ಸಿದ್ದರಾಮಯ್ಯ ಬಜೆಟ್‍ನಲ್ಲಿ ಅನುದಾನ ಕಡಿತ ಮಾಡಿದ್ದಾರೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹೆಚ್ಚಿನ ಅನುದಾನ ನೀಡಿದ್ದರು ಎಂದು ಹೇಳಿದರು.
ಗಂಗಾಕಲ್ಯಾಣ ಯೋಜನೆ: ಗಂಗಾಕಲ್ಯಾಣ ಯೋಜನೆಗೂ ಕಡಿಮೆ ಅನುದಾನ ನೀಡಿದ್ದಾರೆ ಎಂದಾಗ, ಮಧ್ಯ ಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಗಂಗಾ ಕಲ್ಯಾಣ ಯೋಜನೆಯಡಿ 431 ಕೋಟಿ ರೂಪಾಯಿ ಹಗರಣ ನಡೆದಿದೆ. ನಾವು ಕಡಿಮೆ ಹಣ ನೀಡಿರಬಹುದು. ಆದರೆ ನಿಮ್ಮಲ್ಲಿ ಹಗರಣ ಆಗಿದೆಯಲ್ಲಾ ಎಂದು ತಿರುಗೇಟು ನೀಡಿದರು.
ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಪ್ರತಿ ವಿದ್ಯಾರ್ಥಿ ಮೇಲೆ 1,04,114 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ರಾಜ್ಯದಲ್ಲಿ 1.06 ಲಕ್ಷ ಶಿಕ್ಷಕರಿದ್ದಾರೆ. ಶಿಕ್ಷಣ ಇಲಾಖೆಯನ್ನು ಎರಡು ಭಾಗ ಮಾಡಬೇಕು. ಶಿಕ್ಷಕರಿಗೆ ಪ್ರತ್ಯೇಕ ಇಲಾಖೆ ಹಾಗೂ ಮತ್ತೊಂದು ಇಲಾಖೆಯನ್ನು ಶಿಕ್ಷಣ ಸುಧಾರಣೆಗಾಗಿ ನಿಯೋಜಿಸಬೇಕು. ಶಿಕ್ಷಣ, ಶಾಲೆ, ಶಿಕ್ಷಕರು ಮೂವರು ಬಹಳ ಮುಖ್ಯ. ಆದರೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳ ಹೆಚ್ಚಿನ ಸಮಯ ಶಿಕ್ಷಕರನ್ನು ನೋಡಿಕೊಳ್ಳುವ ಸಲುವಾಗಿಯೇ ವ್ಯಯವಾಗುತ್ತಿದೆ. ಹಾಗಾಗಿ ಶಿಕ್ಷಣ ಸುಧಾರಣೆಗೆ ಸಮಯವೇ ಇಲ್ಲವಾಗಿದೆ. ಅದಕ್ಕಾಗಿ ಪ್ರತ್ಯೇಕ ಇಲಾಖೆ ಮಾಡಿ ಎಂದು ಸಲಹೆ ನೀಡಿದರು.
ಜಪಾನ್ ನಲ್ಲಿ ಮಕ್ಕಳು, ಶಿಕ್ಷಕರು ಸೇರಿ ಶಾಲೆ ಆವರಣ, ಶೌಚಾಲಯ ಸೇರಿ ಎಲ್ಲವನ್ನು ಸ್ವಚ್ಛ ಮಾಡುತ್ತಿದ್ದಾರೆ. ಅದಕ್ಕಾಗಿ ಜಪಾನ್ ಸ್ವಚ್ಛವಾಗಿದೆ ಎಂದಾಗ, ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ಅದೇ ರೀತಿ ನಾವು ಶಾಸಕರು ವಿಧಾನಸಭೆ ಸ್ವಚ್ಛ ಗೊಳಿಸಬೇಕಿದೆ ಎಂದು ತಿಳಿಸಿದರು.
ಬಿಜೆಪಿ ಸದಸ್ಯ ವಿ. ಸುನೀಲ್ ಕುಮಾರ್ ಮಾತನಾಡಿ, ನಿಮ್ಮ ಮಾತಿನ ಗೂಡಾರ್ಥ ಸ್ವಲ್ಪ ಬಿಡಿಸಿ ಹೇಳಿ, ಕೊನೆಯ 45 ನಿಮಿಷ ನಾವು ಇಲ್ಲಿ ಉಳಿದು ಸ್ವಚ್ಛತಾ ಕೆಲಸ ಮಾಡಬೇಕೆ? ಎಂದು ಕೇಳಿದರು. ಹೌದು, ಮುಂದೆ ಶಾಸಕರಿಂದ ಒಂದು ದಿನ ವಿಧಾನಸೌಧ ಸ್ವಚ್ಛಗೊಳಿಸುವ ಕಾರ್ಯಕ್ರಮ ನಿಗದಿ ಮಾಡಲಾಗುವುದು ಎಂದು ಸಭಾಧ್ಯಕ್ಷರು ನಗುತ್ತಲೇ ಹೇಳಿದರು.
ಮಾತು ಮುಂದುವರೆಸಿದ ಅರವಿಂದ್ ಬೆಲ್ಲದ್, ರಾಜ್ಯದಲ್ಲಷ್ಟೇ ಅಲ್ಲ, ದೇಶದಲ್ಲೂ ಮದ್ಯಪಾನದಿಂದಾಗುತ್ತಿರುವ ಅನಾಹುತಗಳ ಬಗ್ಗೆ ಗಂಭೀರ ಆಲೋಚನೆ ಮಾಡಬೇಕಿದೆ. ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಅನುದಾನ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರ ಬಜೆಟ್ ಅನ್ನು ಒಂದೇ ವಾಕ್ಯದಲ್ಲಿ ವಿವರಿಸಬೇಕಾದರೆ ಸಾಲ ಮಾಡಿ ತುಪ್ಪ ತಿನ್ನುವಂತಾಗಿದೆ. ಇಡೀ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಆಗ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿಯ ಶಾಸಕರು ಹಿಂದೆ ತಮ್ಮ ಸರ್ಕಾರದ ಅವಧಿಯಲ್ಲಿ ಎಷ್ಟು ಹಣ ಬಾಕಿ ಇಡಲಾಗಿತ್ತು, ಎಷ್ಟು ಬಿಲ್ ಉಳಿಸಿಹೋಗಿದ್ದರು ಎಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.
ಇದನ್ನೂಓದಿ:ಜಗತ್ತಿನ ಸುಳ್ಳು ಬಿಜೆಪಿಯವರ ಬಾಯಲ್ಲಿ ಸಿಗುತ್ತದೆ: ಸಚಿವ ದಿನೇಶ್ ಗುಂಡೂರಾವ್