ಬೆಂಗಳೂರು: ಹತ್ತು ವರ್ಷಗಳಿಂದ ಶಾಂತವಾಗಿದ್ದ ರಾಜ್ಯ ರಾಜಧಾನಿಯಲ್ಲಿ ಮತ್ತೊಮ್ಮೆ ಬಾಂಬ್ ಸದ್ದು ಕೇಳಿಸಿದೆ. ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಇಂದು ಮಧ್ಯಾಹ್ನ ಸ್ಫೋಟ ಸಂಭವಿಸಿದ್ದು, ಸಾಕಷ್ಟು ಅನುಮಾನಗಳು ವ್ಯಕ್ತವಾಗಿವೆ. ಮೇಲ್ನೋಟಕ್ಕೆ ಇದು ದ್ವೇಷದ ಸ್ಪೋಟ ಎನ್ನಲಾಗುತ್ತಿದೆಯಾದರೂ ಐಇಡಿ ಬಳಸಿ ಸ್ಫೋಟಿಸಲಾಗಿದೆ ಎಂಬ ಮಾಹಿತಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಹಂಚಿಕೊಂಡಿದ್ದಾರೆ. ಈ ಮೂಲಕ ಶಾಂತವಾಗಿದ್ದ ಬೆಂಗಳೂರಿನಲ್ಲಿ ಹತ್ತು ವರ್ಷಗಳ ಬಳಿಕ ದುಷ್ಕರ್ಮಿಗಳ ಅಟ್ಟಹಾಸ ಮರುಕಳಿಸಿದೆ. ಹಾಗಾದರೆ ಬೆಂಗಳೂರಿನಲ್ಲಿ ಇದುವರೆಗೂ ಸಂಭವಿಸಿದ ಸ್ಫೋಟ ಪ್ರಕರಣಗಳ ಹಿನ್ನೋಟ ಹೀಗಿದೆ.
ಜುಲೈ 25, 2008: ಆಗತಾನೆ ಜೈಪುರ, ಅಹಮದಾಬಾದ್ನಲ್ಲಿ ಸಂಭವಿಸಿದ್ದ ಸರಣಿ ಸ್ಫೋಟಗಳ ಕುರಿತು ಕೇಳಿದ್ದ ಸ್ಫೋಟದ ಸದ್ದು ರಾಜಧಾನಿಯಲ್ಲೂ ಕೇಳಿಬಂದಿತ್ತು. 2008ರ ಜುಲೈ 25ರಂದು ನಗರದ ಮಡಿವಾಳ ಬಸ್ ನಿಲ್ದಾಣ, ಮೈಸೂರು ರಸ್ತೆ, ಆಡುಗೋಡಿ, ಕೋರಮಂಗಲ, ವಿಠಲ್ ಮಲ್ಯ ರಸ್ತೆ, ಲ್ಯಾಂಗ್ ಫೋರ್ಡ್ ಟೌನ್, ರಿಚ್ಮಂಡ್ ಟೌನ್ ಬಳಿ ಒಂದರ ಹಿಂದೊಂದರಂತೆ ಲಘು ಸ್ಫೋಟಗಳನ್ನು ಸಂಘಟಿಸಲಾಗಿತ್ತು.
ಘಟನೆಯಲ್ಲಿ ಹಲವರು ಗಾಯಗೊಂಡು, ಓರ್ವ ಮಹಿಳೆ ಮೃತಪಟ್ಟಿದ್ದರು. ಜುಲೈ 26ರಂದು ಕೋರಮಂಗಲದ ಫೋರಂ ಮಾಲ್ ಬಳಿ ಪತ್ತೆಯಾದ ಮತ್ತೊಂದು ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಸರಣಿ ಸ್ಫೋಟದಲ್ಲಿ 32 ಆರೋಪಿಗಳು ಭಾಗಿಯಾಗಿದ್ದರು ಎಂಬುದು ತಿಳಿದು ಬಂದಿತ್ತು. ತನಿಖೆ ಕೈಗೊಂಡ ರಾಜ್ಯ ಭಯೋತ್ಪಾದಕ ನಿಗ್ರಹ ದಳದ ಪೊಲೀಸರು ಪ್ರಮುಖ ಆರೋಪಿ ನಜೀರ್ ಸಹಿತ ಇದುವರೆಗೂ 20ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದಾರೆ.
ಏಪ್ರಿಲ್ 17, 2010: ಪ್ರತಿಷ್ಟಿತ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯಕ್ಕೂ ಕೆಲವೇ ನಿಮಿಷಗಳ ಮೊದಲು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸ್ಫೋಟ ಸಂಭವಿಸಿತ್ತು. ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್‌ನ ಗೇಟ್ ನಂಬರ್ 12, ಕ್ವೀನ್ಸ್ ರೋಡ್ ಗೇಟ್ ನಂ. 8, ಬಿಎಂಟಿಸಿ ಬಸ್ ಸ್ಟಾಪ್ ಗೇಟ್ ನಂ. 1ರ ಬಳಿ ಐಇಡಿ (ಸುಧಾರಿತ ಸ್ಪೋಟಕ ಸಾಧನ) ಇರಿಸಿದ್ದರು. ಆ ಪೈಕಿ ಗೇಟ್ ನಂ. 12ರಲ್ಲಿದ್ದ ಬಾಂಬ್ ಸ್ಫೋಟಗೊಂಡು 15 ಮಂದಿ ಗಾಯಗೊಂಡಿದ್ದರು. ಉಳಿದವುಗಳನ್ನು ಪೊಲೀಸರು ಪತ್ತೆ ಮಾಡಿ ನಿಷ್ಕ್ರಿಯಗೊಳಿಸಿದ್ದರು. ತನಿಖೆ ವೇಳೆ ಇಂಡಿಯನ್ ಮುಜಾಹಿದೀನ್ ಸಂಘಟನೆ ಕೈವಾಡ ಬಯಲಾಗಿತ್ತು. ಪ್ರಕರಣದ 14 ಮಂದಿ ಆರೋಪಿಗಳ ಪೈಕಿ ಮೂವರಿಗೆ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
17 ಏಪ್ರಿಲ್, 2013: ಮಲ್ಲೇಶ್ವರಂನ ಭಾರತೀಯ ಜನತಾ ಪಾರ್ಟಿಯ ರಾಜ್ಯ ಕಚೇರಿಯ ಮುಂಭಾಗದಲ್ಲೇ ಸ್ಫೋಟಿಸಲಾಗಿತ್ತು. ಕಾರುಗಳ ಮಧ್ಯೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನದಲ್ಲಿ ಐಇಡಿ (ಸುಧಾರಿತ ಸ್ಪೋಟಕ ಸಾಧನ) ಇರಿಸಿ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ ಭದ್ರತಾ ಕರ್ತವ್ಯದಲ್ಲಿ 8 ಜನ ಪೊಲೀಸ್ ಸಿಬ್ಬಂದಿ ಸಹಿತ 16 ಜನ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸೈಯ್ಯದ್ ಅಮೀರ್ ಹಾಗೂ ಜಹಾನ್ ಅಲಿ ಎಂಬಾತನನ್ನ ಬಂಧಿಸಿದ್ದರು.
ಡಿಸೆಂಬರ್ 28, 2014: ಹೊಸ ವರ್ಷ ಬರಮಾಡಿಕೊಳ್ಳುವ ಸಂಭ್ರಮದಲ್ಲಿದ್ದ ರಾಜಧಾನಿಯಲ್ಲಿ ಮತ್ತೆ ಬಾಂಬ್ ಸದ್ದು ಕೇಳಿಬಂದಿತ್ತು. ಡಿಸೆಂಬರ್ 28ರಂದು ಚರ್ಚ್ ಸ್ಟ್ರೀಟ್‌ನ ರೆಸ್ಟೋರೆಂಟ್ ವೊಂದರ ಹೊರಭಾಗದಲ್ಲಿ ಬಾಂಬ್ ಇಟ್ಟು ಸ್ಪೋಟಿಸಲಾಗಿತ್ತು. ತನಿಖೆ ವೇಳೆ ಆರೋಪಿಗಳು ಅಲ್ಯುಮಿನಿಯಂ ಪೌಡರ್, ಸಲ್ಫರ್ ಹಾಗೂ ಪೊಟ್ಯಾಸಿಯಂ ನೈಟ್ರೇಟ್ ಒಳಗೊಂಡ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸಿರುವುದು ತಿಳಿದು ಬಂದಿತ್ತು.
ಸ್ಫೋಟದಲ್ಲಿ ಭವಾನಿ ಎಂಬ 37 ವರ್ಷದ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದರು. ಅವರ ಅಳಿಯ ಕಾರ್ತಿಕ್ (21), ಹಾಗೂ ಸಂದೀಪ್ ಹೆಚ್ (39) ವಿನಯ್ ಎಂ.ಆರ್ (35) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಯಾವುದೇ ಸಂಘಟನೆಯೂ ಸಹ ಸ್ಪೋಟದ ಹೊಣೆ ಹೊತ್ತಿರಲಿಲ್ಲ. ಆದರೆ ಬೆಂಗಳೂರು ಪೊಲೀಸರು ಇಂಡಿಯನ್ ಮುಜಾಹಿದೀನ್ ಸಂಘಟನೆಯ ನಂಟು ಹೊಂದಿದ್ದ ಹೈದರ್ ಅಲಿ ಹಾಗೂ ಒಮರ್ ಸಿದ್ದಿಕಿ ಎಂಬಾತನನ್ನು ಬಂಧಿಸಿದ್ದರು.
ಇದನ್ನೂ ಓದಿ: ರಾಮೇಶ್ವರ ಕೆಫೆಯಲ್ಲಿ ಸ್ಫೋಟ: ಸ್ಥಳ ಪರಿಶೀಲನೆ ನಡೆಯುತ್ತಿದೆ- ಗೃಹ ಸಚಿವ ಪರಮೇಶ್ವರ್