ಬೆಂಗಳೂರು : ರಾಜಧಾನಿಯಲ್ಲಿ ಬೆಚ್ಚಿಬೀಳಿಸಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿರುವ ಹಲಸೂರುಗೇಟ್ ಠಾಣೆ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ.
ಮಡಿವಾಳದ ನಿವಾಸಿಯಾಗಿರುವ ಆರೋಪಿ ಭದ್ರಾನ ವೈದ್ಯಕೀಯ ಪರೀಕ್ಷೆ ಮುಗಿದಿದೆ. ಬಳಿಕ ಹೊತ್ತಿನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲು ಸಿಬ್ಬಂದಿ ಮುಂದಾಗಿದ್ದಾರೆ. ಕುಂಬಾರಪೇಟೆಯಲ್ಲಿ ಶ್ರೀಹರಿ ಮಾರ್ಕೆಟಿಂಗ್ ಹೆಸರಿನಲ್ಲಿ ಮೃತ ಸುರೇಶ್, ಅಡುಗೆ ಮಾಡುವ ಪರಿಕರಗಳ ಮಾರಾಟದ ಅಂಗಡಿ ಇಟ್ಟುಕೊಂಡಿದ್ದರು.
ಈ ಅಂಗಡಿಗೆ ಹೊಂದಿಕೊಂಡಂತೆ ಕಟ್ಟಡದ ವಿಚಾರವಾಗಿ ಆರೋಪಿ ಭದ್ರಾ ಹಾಗೂ ಸುರೇಶ್ ನಡುವೆ ಹಲವು ವರ್ಷಗಳಿಂದ ಕಲಹ ಏರ್ಪಟ್ಟಿತ್ತು. ಇಬ್ಬರ ನಡುವೆ ಆಗಾಗ್ಗೆ ಗಲಾಟೆ ಸಹ ನಡೆಯುತ್ತಿತ್ತು. ಇದೇ ವಿಚಾರಕ್ಕಾಗಿ ಇಬ್ಬರು ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಈ ಸಂಬಂಧ ಪೊಲೀಸರು 2022ರಲ್ಲಿ ಸಿಆರ್ಪಿಸಿ 107ರ ಪ್ರಕಾರ ಮುಂದೆ ಗಲಾಟೆ ಮಾಡಿಕೊಂಡರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿ ಇಬ್ಬರಿಂದ ಮುಚ್ಚಳಿಕೆ ಬರೆಯಿಸಿ ಕಳುಹಿಸಿದ್ದರು.
ಹೀಗಿದ್ದರೂ ಆಗಾಗ್ಗೆ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. ಈ ನಡುವೆ ಕಟ್ಟಡ ಮಾಲೀಕತ್ವ ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಸುರೇಶ್ ಪರವಾಗಿ ತೀರ್ಪು ಬಂದಿತ್ತು. ಮತ್ತೊಂದೆಡೆ ಭದ್ರಾನ ವಿರುದ್ಧ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.
ಆಸ್ತಿ ವಿಚಾರದ ಗಲಾಟೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿಗೆ ಬಂದಿದ್ದ ಭದ್ರಾ ಸುರೇಶ್ ಮೇಲೆ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ.
ಚಾಕುವಿನಿಂದ ತಿವಿದು ಪೊಲೀಸರಿಗೆ ಶರಣು: ಸುರೇಶ್ ಕಿರುಚಾಟ ಕೇಳಿ ಆತನ ಸ್ನೇಹಿತ ಮಹೇಂದ್ರ ಜಗಳ ಬಿಡಿಸಲು ಮುಂದಾಗಿದ್ದ. ಈ ವೇಳೆ ಮಹೇಂದ್ರನಿಗೂ ಚಾಕುವಿನಿಂದ ಇರಿದು ಬರ್ಬರವಾಗಿ ಇಬ್ಬರನ್ನು ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಚಾಕುವಿನಿಂದ ಹತ್ಯೆಗೈದ ಬಳಿಕ ಭದ್ರಾ ಆಕ್ರೋಶಭರಿತನಾಗಿ ಮಾತನಾಡುತ್ತಿದ್ದುದನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಡಬಲ್ ಮರ್ಡರ್: ಚಾಕುವಿನಿಂದ ಇರಿದು ವ್ಯಾಪಾರಿಗಳ ಕೊಲೆ, ಆರೋಪಿ ವಶಕ್ಕೆ