ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಮತ್ತು ರಾಜ್ಯದ ಬೇರೆ ಬೇರೆ ಜೈಲುಗಳಲ್ಲಿರುವ ಎಲ್ಲ ಆರೋಪಿಗಳು ಕಾರಾಗೃಹದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ವಿಚಾರಣೆಗೆ ಇಂದು ಹಾಜರಾಗಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದ ಕೆಲ ಆರೋಪಿಗಳಿಗೆ ವಿಶೇಷ ಆತಿಥ್ಯ ನೀಡಿದ ಫೋಟೋ ವೈರಲ್ ಆಗಿತ್ತು. ಆ ಬಳಿಕ ಪ್ರಕರಣದ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿತ್ತು. ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿದ್ದರೆ, ಇನ್ನುಳಿದ ಆರೋಪಿಗಳನ್ನು ಮೈಸೂರು, ತುಮಕೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ವಿಜಯಪುರ ಮತ್ತು ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇನ್ನು ನಟಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲೇ ಇದ್ದಾರೆ.
ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಇಂದು ಮುಕ್ತಾಯವಾಗಲಿದ್ದು, ಆಯಾ ಕಾರಾಗೃಹಗಳಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ.
ಆರೋಪಿಗಳ ಕೈಗೆ ಇಂದು ಚಾರ್ಜ್ಶೀಟ್: ಪ್ರಕರಣ ಸಂಬಂಧ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ಇಂದು ಎಲ್ಲಾ 17 ಜನ ಆರೋಪಿಗಳ ಕೈ ಸೇರಲಿದೆ. ಚಾರ್ಜ್ ಶೀಟ್ ಕೈ ಸೇರಿದ ಬಳಿಕ ಆರೋಪಿಗಳು ಇಂದೇ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದರಿಂದ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳು ಸೋಮವಾರ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಚಾರ್ಜ್ ಶೀಟ್ನಲ್ಲಿ ಏನಿದೆ?: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಸುದೀರ್ಘ ಚಾರ್ಜ್ಶೀಟ್ ಸಲ್ಲಿಸಿದ್ದು, ಇದರಲ್ಲಿ ಪ್ರತ್ಯಕ್ಷ ಸಾಕ್ಷ್ಯಗಳು, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಹಾಗೂ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ (ಸಿಎಫ್ಎಸ್ಎಲ್) ದಿಂದ ಪಡೆದಿರುವ 8 ವರದಿಗಳನ್ನೂ ಉಲ್ಲೇಖಿಸಲಾಗಿದೆ. ತನಿಖೆ ಇನ್ನೂ ಸಹ ಪೂರ್ಣಗೊಂಡಿಲ್ಲದಿರುವುದರಿಂದ ಸಿಆರ್ಪಿಸಿ 173(8) ಅಡಿ ನ್ಯಾಯಾಲಯಕ್ಕೆ ಪ್ರಾಥಮಿಕ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಹಾಗೆಯೇ ನಟ ದರ್ಶನ್ ಅವರನ್ನು A2 ಆರೋಪಿಯಾಗಿ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಜೂನ್ 9 ರಂದು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸತ್ವ ಅನುಗ್ರಹ ಅಪಾರ್ಟ್ಮೆಂಟ್ ಸಮೀಪದ ಮೋರಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಆ ಬಳಿಕ ಆರೋಪಿಗಳಾದ ರಾಘವೇಂದ್ರ, ಕಾರ್ತಿಕ್, ನಿಖಿಲ್ ನಾಯ್ಕ್ ಕೇಶವಮೂರ್ತಿ ಕಾಮಾಕ್ಷಿಪಾಳ್ಯ ಠಾಣೆಗೆ ಹಾಜರಾಗಿ, ರೇಣುಕಾಸ್ವಾಮಿಯನ್ನು ತಾವೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಬಳಿಕ ವಿಚಾರಣೆಯಲ್ಲಿ ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ಹೆಸರು ಹೇಳಿದ್ದರು. ಇದರಿಂದಾಗಿ ಜೂನ್ 11 ರಂದು ದರ್ಶನ್ ಮತ್ತು ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ನನ್ನ ಮಗಳು ಗಂಡನನ್ನು ಕಳೆದುಕೊಂಡು ನೋವಿನಲ್ಲಿದ್ದಾಳೆ; ಮೃತ ರೇಣುಕಾಸ್ವಾಮಿ ಮಾವ ಸೋಮನಾಥಯ್ಯ - Somanathaiah